ಹಂದಿ ಶಿಕಾರಿಗಾಗಿ ದುಷ್ಕರ್ಮಿಗಳು ಸಮೀಪದ ತೋಟವೊಂದರಲ್ಲಿ ಅಡಿಕೆಯೊಳಗೆ ನಾಡಬಾಂಬ್ ಇರಿಸಿದ್ದರು ಎನ್ನಲಾಗಿದೆ. ಈ ಅಪಾಯಕಾರಿ ವಸ್ತುವನ್ನು ನಾಯಿಯೊಂದು ಕಚ್ಚಿಕೊಂಡು ಬಂದು ಮನೆಯ ಅಂಗಳದಲ್ಲಿ ಹಾಕಿತ್ತು. ಅಂಗಳದಲ್ಲಿದ್ದ ಆ ವಸ್ತುವನ್ನು ಗಮನಿಸಿದ ಕಮಲಮ್ಮ ಅವರು ಅದನ್ನು ತೆಗೆಯಲು ಹೋದಾಗ ಒಮ್ಮೆಲೆ ಸ್ಫೋಟಗೊಂಡಿದೆ.ಸ್ಫೋಟದ ತೀವ್ರತೆಗೆ ವೃದ್ಧೆಯ ಕೈ ಹಾಗೂ ಬೆರಳುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಫೋಟದ ಶಬ್ದ ಕೇಳಿ ಧಾವಿಸಿದ ಸ್ಥಳೀಯರು ತಕ್ಷಣ ಅವರನ್ನು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.ಘಟನಾ ಸ್ಥಳಕ್ಕೆ ಆಗುಂಬೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಕ್ರಮ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತೋಟದಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಮಲೆನಾಡು ಭಾಗದಲ್ಲಿ ಕಾಡುಹಂದಿಗಳ ಶಿಕಾರಿಗಾಗಿ ಇಂತಹ ಅಕ್ರಮ ನಾಡಬಾಂಬ್‌ಗಳ ಬಳಕೆ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.