ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ 'ಟ್ರುತ್ ಸೋಶಿಯಲ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಹೊರ್ಮುಜ್ ಜಲಸಂಧಿಯಲ್ಲಿ ಕಡಲ ಮೈನ್‌ಗಳನ್ನು (Sea Mines) ಇರಿಸುವ ಇರಾನ್‌ನ ಯತ್ನವನ್ನು ತಡೆದು, ಬೃಹತ್ ಮತ್ತು ಪ್ರಬಲ ದಾಳಿ ನಡೆಸಲಾಗಿದೆ. ಒಂದು ವೇಳೆ ಇರಾನ್ ಇದಕ್ಕೆ ಪ್ರತಿದಾಳಿ ನಡೆಸಲು ಯತ್ನಿಸಿದರೆ, ಇದಕ್ಕಿಂತಲೂ ತೀವ್ರ ಸ್ವರೂಪದ ಪ್ರಹಾರ ಎದುರಿಸಬೇಕಾಗುತ್ತದೆ" ಎಂದು ಬೆದರಿಕೆ ಹಾಕಿದ್ದಾರೆ.ಅಮೆರಿಕದ ದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್‌ನ ರೆವಲ್ಯೂಷನರಿ ಗಾರ್ಡ್, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಿದ್ದಾಗಿ ಘೋಷಿಸಿದೆ. ಇರಾನ್‌ನ ಬಂದರ್ ಅಬ್ಬಾಸ್, ಚಬಾಹಾರ್, ಕೊನಾರಕ್, ಕ್ವೆಶ್ಮ್ ದ್ವೀಪ, ಸಿರಿಕ್ ಮತ್ತು ಜಸ್ಕ್ ಪ್ರಮುಖವಾಗಿ ಹಾನಿಗೊಳಗಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೊರ್ಮೊಜ್ಗನ್ ಪ್ರಾಂತ್ಯದ ಕುಹೆಸ್ಟಾಕ್ ನಗರದಲ್ಲಿ ಮದುವೆ ನಡೆಯುತ್ತಿದ್ದ ಮನೆಯೊಂದರ ಮೇಲೆಯೂ ದಾಳಿಯಾಗಿದ್ದು, ಒಂದು ಮಗು ಸೇರಿದಂತೆ 4 ಮಂದಿ ಸಾವನ್ನಪ್ಪಿದ್ದಾರೆ ಮತ್ತು 53ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸಂಸ್ಥೆ ತಿಳಿಸಿದೆ.ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಪಡೆಗಳು, "ನಾವು IRGC ಮಾದರಿಯಲ್ಲಿ ಎಂದಿಗೂ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ. ಕೇವಲ ಮಿಲಿಟರಿ ನೆಲೆಗಳನ್ನು ತಲುಪಿದ್ದೇವೆ" ಎಂದಿವೆ. ಆರು ತಿಂಗಳುಗಳಿಂದ ನಡೆಯುತ್ತಿರುವ ಉಭಯ ದೇಶಗಳ ಈ ಸಂಘರ್ಷದಿಂದಾಗಿ, ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ