Dailyhunt
ಕಾರಿನ ಮೇಲೆ ಪಲ್ಟಿಯಾದ  ಬಸ್ -  ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!

ಕಾರಿನ ಮೇಲೆ ಪಲ್ಟಿಯಾದ ಬಸ್ - ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!

ಡಿಕೇರಿ, ಏಪ್ರಿಲ್ 04: ಪ್ರವಾಸಿಗರ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ಶನಿವಾರ ನಡೆದಿದೆ.ಮಧ್ಯಾಹ್ನ ಮರಗೋಡು ಗ್ರಾಮದ ತಿರುವಿನಲ್ಲಿ ಚಾಲಕ ಸುದೀಪ್ ಎಂಬುವವರು ಪ್ರವಾಸಿ ಬಸ್ಸನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ನೇರ ಕಾರಣ ಎನ್ನಲಾಗಿದೆ.
ವೇಗದ ಮೇಲೆ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಏಕಾಏಕಿ ಉರುಳಿ ಬಿದ್ದಿದೆ. ಬಸ್ ಉರುಳಿದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿಕೊಂಡಿದ್ದ ನಾಲ್ವರು ಪ್ರಯಾಣಿಕರಿಗೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾಗಿವೆ.ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಉರುಳುವ ಮುನ್ನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬಸ್ಸಿನ ವೇಗ ತುಸು ಕಡಿಮೆಯಾಗಿ, ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು, ನಂತರ ಕ್ರೇನ್ ಸಹಾಯದೊಂದಿಗೆ ಬಸ್ಸನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಚಾಲಕನ ವಿರುದ್ಧ ಅಜಾಗರೂಕ ಚಾಲನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror