ರಾಮನಗರ ಜುಲೈ 02: ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದೆ. ಇಲ್ಲಿನ 'ಕಾವೇರಿ ಕ್ರಷರ್' ಮಾಲೀಕತ್ವಕ್ಕೆ ಸೇರಿದ ಕ್ವಾರಿಯಲ್ಲಿ ಹಿಟಾಚಿ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಕಲ್ಲು ಬಂಡೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಏಳು ಜನ ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಏಳು ಜನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇತರ ಕಾರ್ಮಿಕರನ್ನು ತಕ್ಷಣವೇ ಬೆಂಗಳೂರಿನ ಆರ್.ಆರ್. (ರಾಜರಾಜೇಶ್ವರಿ) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಹಾಗೂ ಆಧುನಿಕ ಕತ್ತರಿಸುವ ಯಂತ್ರಗಳ ಮೂಲಕ ಬಿದ್ದಿರುವ ದೈತ್ಯ ಬಂಡೆಗಳನ್ನು ಸರಿಸಿ, ಒಳಗಡೆ ಸಿಲುಕಿರುವ ಇತರ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಸುರಕ್ಷತಾ ಕ್ರಮಗಳ ಲೋಪವೇ ಈ ಭೀಕರ ಅವಘಡಕ್ಕೆ ಕಾರಣ ಎನ್ನಲಾಗುತ್ತಿದ್ದು, ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

