Dailyhunt
ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಆಯಸಿಡ್ ಎರಚಿದ ಪತ್ನಿ

ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಆಯಸಿಡ್ ಎರಚಿದ ಪತ್ನಿ

ಕೋಲಾರ, ಏಪ್ರಿಲ್ 02: ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಪತ್ನಿ ಆಸಿಡ್ ಎರೆಚಿದ ಘಟನೆ ಕೋಲಾರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು. ದಾಳಿಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆ ಆಯೇಷಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ಆಯೇಷಾ ಮತ್ತು ಗಾಯಾಳು ಮುಸ್ಕಾನ್ ಪರಸ್ಪರ ಹತ್ತಿರದ ಸಂಬಂಧಿಗಳಾಗಿದ್ದಾರೆ. ಆಯೇಷಾಳ ಪತಿ ಶಾಬಾಜ್ ಅಹಮದ್‌ನ ತಮ್ಮನ ಪತ್ನಿಯೇ ಈ ಮುಸ್ಕಾನ್. ಮುಸ್ಕಾನ್ ಪತಿಯು ಕುಡಿತದ ವ್ಯಸನಿಯಾಗಿದ್ದು, ಕುಟುಂಬದ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲನಾಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಶಾಬಾಜ್ ಅಹಮದ್ ಮುಸ್ಕಾನ್‌ಗೆ ಹಣಕಾಸಿನ ನೆರವು ನೀಡುತ್ತಿದ್ದರು.

ಈ ನೆಪದಲ್ಲಿ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎಂಬ ಆರೋಪ ಕೇಳಿಬಂದಿದೆ.ಕಳೆದ ಮೂರು ತಿಂಗಳ ಹಿಂದೆ ಶಾಬಾಜ್ ಮತ್ತು ಮುಸ್ಕಾನ್ ನಾಪತ್ತೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ ಕುಟುಂಬಸ್ಥರು ಇಬ್ಬರನ್ನೂ ಪತ್ತೆಹಚ್ಚಿ ವಾಪಸ್ ಕೋಲಾರಕ್ಕೆ ಕರೆತಂದಿದ್ದರು. ಈ ಸಮಸ್ಯೆಯನ್ನು ಬಗೆಹರಿಸಲು ರಾತ್ರಿ ಸಂಬಂಧಿಕರ ಮನೆಯಲ್ಲಿ 'ರಾಜಿ ಪಂಚಾಯ್ತಿ' ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಈ ವೇಳೆ ಮೊದಲೇ ಯೋಜಿಸಿದಂತೆ ಬಾತ್ ರೂಂ ಕ್ಲೀನಿಂಗ್ ಆಯಸಿಡ್ ಬಾಟಲಿಯನ್ನು ಮರೆಮಾಚಿ ತಂದಿದ್ದ ಆಯೇಷಾ, ಒಮ್ಮೆಲೇ ಮುಸ್ಕಾನ್ ಮುಖಕ್ಕೆ ಆಸಿಡ್ ಎರಚಿದ್ದಾಳೆ. ದಾಳಿಯ ಬೆನ್ನಲ್ಲೇ ಆಕೆ ಸ್ಥಳದಿಂದ ಪರಾರಿಯಾಗಿದ್ದಳು.ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಗಲ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ಆಯೇಷಾಳನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror