Dailyhunt
ರಿಪೇರಿಗೆ ನಿಂತಿದ್ದ ಜೆಸಿಬಿಗೆ ಕಾರು ಡಿಕ್ಕಿ - ಜೆಸಿಬಿ ಚಾಲಕನ ತಲೆ ತುಂಡಾಗಿ ಕಾರಿನ ಇಂಜಿನ್ ನಲ್ಲಿ ಪತ್ತೆ

ರಿಪೇರಿಗೆ ನಿಂತಿದ್ದ ಜೆಸಿಬಿಗೆ ಕಾರು ಡಿಕ್ಕಿ - ಜೆಸಿಬಿ ಚಾಲಕನ ತಲೆ ತುಂಡಾಗಿ ಕಾರಿನ ಇಂಜಿನ್ ನಲ್ಲಿ ಪತ್ತೆ

ಹುಬ್ಬಳ್ಳಿ, ಏಪ್ರಿಲ್ 22: ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಜೆಸಿಬಿ ಯಂತ್ರವನ್ನು ರಿಪೇರಿ ಮಾಡುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಜೆಸಿಬಿ ಚಾಲಕನ ರುಂಡವು ದೇಹದಿಂದ ಬೇರ್ಪಟ್ಟು ಕಾರಿನ ಇಂಜಿನ್ ಒಳಗೆ ಸಿಲುಕಿದ ಘಟನೆ ಹುಬ್ಬಳ್ಳಿಯ ಕುಂದಗೋಳ ರಸ್ತೆಯ ಶೆರೆವಾಡ ಗ್ರಾಮದ ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಶೆರೆವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ (32) ಎಂದು ಗುರುತಿಸಲಾಗಿದೆ.
ತಾಂತ್ರಿಕ ದೋಷದಿಂದಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಜೆಸಿಬಿ ಯಂತ್ರವನ್ನು ಸರಿಪಡಿಸಲು ಸದಾನಂದ ಅವರು ಕೆಳಗೆ ಬಾಗಿದ್ದರು. ಈ ಸಂದರ್ಭದಲ್ಲಿ ಕುಂದಗೋಳ ಕಡೆಯಿಂದ ಅತೀ ವೇಗವಾಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಅವರಿಗೆ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಡಿಕ್ಕಿಯ ರಭಸಕ್ಕೆ ಸದಾನಂದ ಅವರ ರುಂಡವು ದೇಹದಿಂದ ಬೇರ್ಪಟ್ಟಿದೆ. ಕತ್ತರಿಸಲ್ಪಟ್ಟ ರುಂಡವು ಕಾರಿನ ಮುಂಭಾಗದ ಬಾನೆಟ್ ಸೀಳಿಕೊಂಡು ಇಂಜಿನ್ ಒಳಗೆ ಹೋಗಿ ಸಿಲುಕಿಕೊಂಡಿದೆ. ಅಪಘಾತದ ನಂತರ ಕಾರು ನಿಂತಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇನ್ನು ಅಪಘಾತಕ್ಕೀಡಾದ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನ್‌ನಲ್ಲಿ ಸಿಲುಕಿದ್ದ ರುಂಡವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಾಲಕನ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror