Dailyhunt
ಸಮಾರಂಭದಲ್ಲಿ ಕುಸಿದು ಬಿದ್ದ ನ್ಯಾ. ಸಂತೋಷ್ ಹೆಗ್ಡೆ; ಚಿಕಿತ್ಸೆಗೆ ಸ್ಪಂದನೆ, ಆರೋಗ್ಯ ಸ್ಥಿರ

ಸಮಾರಂಭದಲ್ಲಿ ಕುಸಿದು ಬಿದ್ದ ನ್ಯಾ. ಸಂತೋಷ್ ಹೆಗ್ಡೆ; ಚಿಕಿತ್ಸೆಗೆ ಸ್ಪಂದನೆ, ಆರೋಗ್ಯ ಸ್ಥಿರ

ಬೆಂಗಳೂರು, ಏಪ್ರಿಲ್ 03: ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ (85) ಅವರು ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಾಜಕಾರಣಿ ಪಿ.ಜಿ.ಆರ್.
ಸಿಂಧ್ಯಾ ಅವರ ಅಭಿನಂದನಾ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಸಂತೋಷ್ ಹೆಗ್ಡೆ ಅವರಿಗೆ ತೀವ್ರ ಸುಸ್ತು ಕಾಣಿಸಿಕೊಂಡು ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ತಕ್ಷಣವೇ ಅಲ್ಲಿದ್ದವರು ಅವರಿಗೆ ನೀರು ಕುಡಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾದರು.ಸ್ಥಳದಲ್ಲಿ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ, ಕಾರ್ಯಕ್ರಮದಲ್ಲಿದ್ದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ವಿಳಂಬ ಮಾಡದೆ ತಮ್ಮ ಅಧಿಕೃತ ಸರ್ಕಾರಿ ಕಾರಿನಲ್ಲೇ ನ್ಯಾಯಮೂರ್ತಿಗಳನ್ನು ಮಿಲರ್ಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು.

ಸ್ಪೀಕರ್ ಅವರ ಈ ತುರ್ತು ನಿರ್ಧಾರ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.ಆಸ್ಪತ್ರೆಯ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ದಿಢೀರ್ ಕುಸಿತ (Low Sugar) ಮತ್ತು ರಕ್ತದೊತ್ತಡದ (BP) ವ್ಯತ್ಯಾಸದಿಂದಾಗಿ ಈ ಅಸ್ವಸ್ಥತೆ ಉಂಟಾಗಿದೆ. "ಇದು ಹೃದಯಾಘಾತವಲ್ಲ, ಅತಿಯಾದ ಆಯಾಸದಿಂದ ಉಂಟಾದ ತಲೆಸುತ್ತು. ಸದ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ," ಎಂದು ವೈದ್ಯಕೀಯ ಬುಲೆಟಿನ್ ತಿಳಿಸಿದೆ. ಸದ್ಯ ಅವರು ನಿಗಾ ಘಟಕದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror