Saturday, 27 Feb, 3.17 pm The Mangalore ಮಿರರ್.in

ಪ್ರಮುಖ ಸುದ್ದಿಗಳು
ಸಿಸಿಬಿ ಪೊಲೀಸರ ವಿರುದ್ದ ಸಿಐಡಿ ತನಿಖೆ ಆರಂಭ.. ಆರೋಪಿಗಳು ಇನ್ನೂ ಕರ್ತವ್ಯದಲ್ಲಿ.!!

ಮಂಗಳೂರು ಫೆಬ್ರವರಿ 27: ಹಣ ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ದುಬಾರಿ ಕಾರುಗಳನ್ನು ಮಾರಾಟ ಮಾಡಿರುವ ಸಿಸಿಬಿ ಪೊಲೀಸರ ವಿರುದ್ದ ಈಗ ಸಿಐಡಿ ತನಿಖೆ ಆರಂಭವಾಗಿದೆ. ಆದರೆ ವಿಪರ್ಯಾಸವೆಂದರೆ ಆರೋಪಿ ಸ್ಥಾನದಲ್ಲಿರುವ ಪೊಲೀಸರು ಇನ್ನು ಕರ್ತವ್ಯದಲ್ಲೇ ಇರುವುದು ಅಚ್ಚರಿ ಮೂಡಿಸಿದೆ.


ಐಶಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರತಾಪ್‌ ರೆಡ್ಡಿ ಅವರಿಗೆ ಸಲ್ಲಿಸಿದ 35 ಪುಟಗಳ ಮಧ್ಯಂತರ ವರದಿಯಲ್ಲಿ ನಾರ್ಕೋಟಿಕ್‌ ಆಯಂಡ್‌ ಎಕಾನಮಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಾಮಕೃಷ್ಣ, ನಗರ ಅಪರಾಧ ಪತ್ತೆ ದಳದ ಹಿಂದಿನ ಎಸ್‌ಐ ಕಬ್ಬಳ್‌ರಾಜ್‌, ಸಿಸಿಬಿ ಟೀಂನ ಆಶಿತ್‌, ರಾಜ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ಪೊಲೀಸ್‌ ಬ್ರೋಕರ್‌ ದಿವ್ಯದರ್ಶನ್‌ ವಿರುದ್ಧ ಕೂಡ ಬೊಟ್ಟು ಮಾಡಲಾಗಿದೆ. ಕಳಂಕಿತ ಪೊಲೀಸರಲ್ಲಿ ಮೂವರು ಮಂಗಳೂರು ನಗರ ಠಾಣೆ ವ್ಯಾಪ್ತಿಯಲ್ಲಿದ್ದರೆ, ಕಬ್ಬಳ್‌ರಾಜ್‌ ಚಿಕ್ಕಮಗಳೂರಿನಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಮಾನ್ಯವಾಗಿ ಯಾವುದೇ ಇಲಾಖೆಯಲ್ಲಿ ಆಪಾದನೆಗೊಳಗಾದವರನ್ನು ತನಿಖಾ ಸಮಯದಲ್ಲಿ ದೀರ್ಘ ರಜೆ ಅಥವಾ ಅಮಾನತು ಮಾಡಲಾಗುತ್ತದೆ. ಆದರೆ ಕಾರು ಮಾರಾಟ ಪ್ರಕರಣದಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಿ, 10 ದಿನ ಕಳೆದರೂ ಕಳಂಕಿತರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪ್ರಕರಣದ ತನಿಖೆಗೆ ಸಿಐಡಿ ಇನ್‌ಸ್ಪೆಕ್ಟರ್‌, ಸಿಬ್ಬಂದಿ ನೇತೃತ್ವದ ಮೂವರ ತಂಡ ಮಂಗಳೂರಿಗೆ ಆಗಮಿಸಿ, ನಾನಾ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ ಕಳಂಕಿತ ನಾಲ್ವರಿಗೂ ಸಿಐಡಿ ನೋಟಿಸ್‌ ನೀಡಿದ್ದು, ಇವರು ಬೆಂಗಳೂರು ಸಿಐಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಬೇಕಿದೆ.

ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ನೀಡುತ್ತಿದ್ದಂತೆ ಕಳೆದ 2 ವರ್ಷಗಳಲ್ಲಿ ಸಿಸಿಬಿ ಪೊಲೀಸರ ಜತೆ ಹಣದ ಡೀಲ್‌ ನಡೆಸಿದವರಿಗೆ ಆತಂಕ ಎದುರಾಗಿದೆ. ಇಂತಹ ಕುಳಗಳಿಗೆ ಸ್ವತಃ ಕಳಂಕಿತ ಅಧಿಕಾರಿಯೇ ಕರೆ ಮಾಡಿ ಧೈರ್ಯದ ಮಾತು ಹೇಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: themangaloremirror
Top