Dailyhunt
ಸುದೀಪ್ ಪೋಷಕರ ಆರೋಪಗಳಿಗೆ ಸೌಮ್ಯಾ ಶೆಟ್ಟಿ ಸ್ಪಷ್ಟನೆ - ವೇಣು ಶೆಟ್ಟಿ ವಿರುದ್ಧ ವಾಗ್ದಾಳಿ

ಸುದೀಪ್ ಪೋಷಕರ ಆರೋಪಗಳಿಗೆ ಸೌಮ್ಯಾ ಶೆಟ್ಟಿ ಸ್ಪಷ್ಟನೆ - ವೇಣು ಶೆಟ್ಟಿ ವಿರುದ್ಧ ವಾಗ್ದಾಳಿ

ಡುಪಿ ಎಪ್ರಿಲ್ 02: ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೌಮ್ಯಾ ಶೆಟ್ಟಿ ಈಗ ಮೌನ ಮುರಿದಿದ್ದಾರೆ. ತಮ್ಮ ಪತಿಯ ಸಾವಿಗೆ ತಾನು ಕಾರಣವಲ್ಲ, ಬದಲಿಗೆ ಸುದೀಪ್ ಕುಟುಂಬಸ್ಥರ ಕಿರುಕುಳ ಹಾಗೂ ಕಲಾವಿದ ವೇಣು ಶೆಟ್ಟಿ ಅವರ ಪಿತೂರಿಯೇ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯಾ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಲ್ಲದೆ, ಸುದೀಪ್ ಕುಟುಂಬದವರು ಮತ್ತು ವೇಣು ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದರು. "ಸುದೀಪ್ ಅವರ ಸಾವಿಗೆ ನಾನು ಜವಾಬ್ದಾರಳಲ್ಲ. ಅವರ ಸ್ವಂತ ಕುಟುಂಬದ ಸದಸ್ಯರೇ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ನಡೆದ ಯಾವುದೋ ಘಟನೆಯಿಂದ ಬೇಸತ್ತು ಅವರು ಈ ತೀವ್ರ ನಿರ್ಧಾರ ಕೈಗೊಂಡಿರಬಹುದು.

ಅವರ ಕುಟುಂಬದವರೇ ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಸಂಶಯ ನನಗಿದೆ," ಎಂದು ಸೌಮ್ಯಾ ಪ್ರತಿಪಾದಿಸಿದರು. ನೆಲ್ಯಾಡಿಯಲ್ಲಿ ಗಲಾಟೆ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸುದೀಪ್ ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡು ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ಅವರ ತಾಯಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಹೋಗುವಂತೆ ಹೇಳಿದರು. ಒಬ್ಬ ಹೆಂಡತಿಯಾಗಿ ನಾನು ಧ್ವನಿ ಎತ್ತಿದ್ದು ನಿಜ, ಆದರೆ ನಾನು ರಂಪಾಟ ಕಿರುಚಾಟ ಮಾಡಿಲ್ಲ.

ಸತ್ಯ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬಹುದು," ಎಂದರು. ಕಲಾವಿದ ವೇಣು ಶೆಟ್ಟಿ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದ ಸೌಮ್ಯಾ, "ನಾವಿಬ್ಬರೂ ರಂಗಭೂಮಿ ಕಲಾವಿದರಾಗಿದ್ದರೂ ನಮ್ಮ ನಡುವೆ ಯಾವುದೇ ನಿಕಟ ಸಂಬಂಧವಿರಲಿಲ್ಲ. ಆತ ಈ ಹಿಂದೆ ಮದುವೆ ಪ್ರಸ್ತಾವನೆ ತಂದಿದ್ದ, ಆದರೆ ಆತನ ನಡತೆ ಸರಿಯಿಲ್ಲದ ಕಾರಣ ನಾನು ನಿರಾಕರಿಸಿದ್ದೆ. ಇದೇ ದ್ವೇಷದಿಂದ ಸುದೀಪ್ ತಂದೆಗೆ ಪದೇ ಪದೇ ಕರೆ ಮಾಡಿ ನಮ್ಮ ಸಂಸಾರದಲ್ಲಿ ತಪ್ಪು ತಿಳುವಳಿಕೆ ಮೂಡಿಸುವ ಕೆಲಸ ಮಾಡಿದ್ದಾನೆ," ಎಂದು ಆರೋಪಿಸಿದರು.ಕಾರ್ಕಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಎಲ್ಲಾ ವಿವರಗಳನ್ನು ಒದಗಿಸಿದ್ದೇನೆ ಎಂದ ಸೌಮ್ಯಾ, ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಸುದೀಪ್ ಅವರ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.
Dailyhunt
Disclaimer: This content has not been generated, created or edited by Dailyhunt. Publisher: themangaloremirror