ಚೆನ್ನೈ, ಆಗಸ್ಟ್ 28: ಪ್ಯಾನ್ ಇಂಡಿಯಾ ಆಯಕ್ಷನ್ ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಹಾಗೂ ಸ್ತ್ರೀವಿರೋಧಿ ಧೋರಣೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು 'ವಿ ದಿ ಲೀಡರ್ಸ್' ಸಂಸ್ಥಾಪಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರವಾಗಿ ಟೀಕಿಸಿದ್ದಾರೆ.'ಯಶ್ ಅಭಿನಯದ ಟಾಕ್ಸಿಕ್' ಸಿನಿಮಾ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅಣ್ಣಾಮಲೈ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಿನಿಮಾಗಳ ಸೆನ್ಸಾರ್ ನಿಯಮಗಳು ಕಟ್ಟುನಿಟ್ಟಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಸ್ತ್ರೀವಿರೋಧಿ ವಿಚಾರಗಳು ಹಾಗೂ ನೋಡುವುದಕ್ಕೂ ಕಷ್ಟವಾಗುವ ಹಲವು ದೃಶ್ಯಗಳನ್ನು ವಯೋಮಿತಿ ಹೊಂದಿರುವ ಚಿತ್ರಗಳಲ್ಲಿಯೂ ಪ್ರೇಕ್ಷಕರು ಪದೇಪದೆ ನೋಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.ಸಿನಿಮಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲತಾವು ಸಿನಿಮಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ನಟ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ತನ್ನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.ಅಲ್ಲದೆ, 'ಎ' ಪ್ರಮಾಣಪತ್ರ ಪಡೆದ ಸಿನಿಮಾಗಳ ಪ್ರದರ್ಶನಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪ್ರವೇಶಿಸದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

