ಕುಂದಾಪುರ ಜುಲೈ 07: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದ್ದ ಎರಡು ದ್ವಿಚಕ್ರ ವಾಹನಗಳ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೋರ್ವ ಸವಾರ, ಪೆಟ್ರಿಕ್ ವಾಸ್ (63) ಮಂಗಳವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ತಾಯ್ನಾಡಿಗೆ ಮರಳಿದ್ದ ಅವರು, ಪಡುಕೋಣೆಯಲ್ಲೇ ವೆಲ್ಡಿಂಗ್ ಶಾಪ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಸೋಮವಾರದಂದು ಪೆಟ್ರಿಕ್ ಅವರು ತಮ್ಮ ಪುತ್ರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಬಂಧಿಕರೊಬ್ಬರನ್ನು ಭೇಟಿಯಾಗಲು ತೆರಳಿದ್ದರು. ಭೇಟಿ ಮುಗಿಸಿ ಸಂಜೆ ವೇಳೆ ಮರಳಿ ಮನೆಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿತ್ತು. ಅಪಘಾತದ ರಭಸಕ್ಕೆ ಭಟ್ಕಳದ ದೀಪಕ್ ನಾಯ್ಕ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಮತ್ತೊಂದು ಬೈಕಿನಲ್ಲಿದ್ದ ಪೆಟ್ರಿಕ್ ವಾಸ್ ಹಾಗೂ ಅವರ ಪುತ್ರಿ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಇಬ್ಬರನ್ನೂ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಭಾರಿ ಪೆಟ್ಟು ಬಿದ್ದಿದ್ದರಿಂದ ಪೆಟ್ರಿಕ್ ವಾಸ್ ಮಂಗಳವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

