ಇರಾನ್ ಜೊತೆಗಿನ ಕದನ ವಿರಾಮ ಅಂತ್ಯಗೊಂಡಿದೆ ಎಂದು ಟ್ರಂಪ್ ಘೋಷಿಸುತ್ತಿದ್ದಂತೆ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ ಎದುರಾಗಿದ್ದು, ಇಂದು ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇಂದು ಬೆಳಗ್ಗೆ ಭಾರತೀಯ ಷೇರು ಮಾರುಕಟ್ಟೆ ವಹಿವಾಟು ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಟ್ರಂಪ್ ಘೋಷಣೆಯ ನಕಾರಾತ್ಮಕ ಪ್ರಭಾವ ಎದ್ದು ಕಾಣಿಸಿತು. ಮುಂಬೈ ಷೇರುಪೇಟೆ ಸೂಚ್ಯಂಕ 'ಸೆನ್ಸೆಕ್ಸ್' ಬರೋಬ್ಬರಿ 1663 ಅಂಕಗಳ ಭಾರಿ ಕುಸಿತ ಕಂಡಿದೆ. ಇತ್ತ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 'ನಿಫ್ಟಿ' ಮಹತ್ವದ 23882 ರ ಮೌಲ್ಯಕ್ಕಿಂತ ಕೆಳಕ್ಕೆ ಜಾರಿದೆ.ನಾಗರಿಕ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ವೈಮಾನಿಕ ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯ ಇಂಧನ ಪೂರೈಕೆಗೆ ಆತಂಕ ತಂದಿದೆ. ಇದರ ನೇರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏಕಾಏಕಿ ಶೇಕಡಾ 6ರಷ್ಟು ಭಾರಿ ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 76 ಡಾಲರ್ ಗಡಿಯನ್ನು ದಾಟಿದೆ. ಭಾರತವು ತನ್ನ ಇಂಧನ ಅಗತ್ಯತೆಗಳಿಗಾಗಿ ಶೇ. 80 ಕ್ಕೂ ಹೆಚ್ಚು ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಶೇಕಡಾ 0.2ರಷ್ಟು ಕುಸಿತ ಕಂಡು ಆರ್ಥಿಕ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.