Dailyhunt
ತುಮಕೂರು ಪಿಎಸ್‌ಐ ನಾಪತ್ತೆ ಪ್ರಕರಣ ಸುಖಾಂತ್ಯ: ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಮಂಗಳಮ್ಮ

ತುಮಕೂರು ಪಿಎಸ್‌ಐ ನಾಪತ್ತೆ ಪ್ರಕರಣ ಸುಖಾಂತ್ಯ: ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಮಂಗಳಮ್ಮ

ತುಮಕೂರು, ಏಪ್ರಿಲ್ 04: ಜಿಲ್ಲೆಯ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಂಗಳಮ್ಮ ಅವರು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಕಳೆದ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಅವರು, ಶನಿವಾರ ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಏಪ್ರಿಲ್ 03 ರಂದು ಡಿವೈಎಸ್‌ಪಿ ಕಚೇರಿಯಲ್ಲಿ ನಡೆದಿದ್ದ ಇಲಾಖಾ ಸಭೆಗೆ ಮಂಗಳಮ್ಮ ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಅವರಿಗೆ ಮನೆಯಿಂದ ಕರೆ ಬಂದಿತ್ತು. ಸಭೆ ಮುಗಿಸಿ ಠಾಣೆಗೆ ಮರಳಿದ ಅವರು, ತಮ್ಮ ಸಮವಸ್ತ್ರ ಬದಲಿಸಿ ಸಿವಿಲ್ ಉಡುಪಿನಲ್ಲಿ ಹೊರಗೆ ತೆರಳಿದ್ದರು. ಅಂದಿನಿಂದ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು. ತಾಯಿ ಕಾಣೆಯಾದ ಬಗ್ಗೆ ಆತಂಕಗೊಂಡ ಪುತ್ರಿ ಕುಸುಮಾ, ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲಿ ನಡೆದಿದ್ದ ಕೌಟುಂಬಿಕ ಕಲಹದಿಂದ ಮಂಗಳಮ್ಮ ತೀವ್ರ ಮನನೊಂದಿದ್ದರು ಎನ್ನಲಾಗಿದೆ.

ಇದೇ ಕಾರಣಕ್ಕೆ ಅವರು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹುಡುಕಾಟ ಆರಂಭಿಸಿದ್ದರು. ತೀವ್ರ ಹುಡುಕಾಟದ ನಂತರ ಪಿಎಸ್‌ಐ ಮಂಗಳಮ್ಮ ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದ್ದು, ಇದರಿಂದ ಪೊಲೀಸರು ಮತ್ತು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: themangaloremirror