Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿಯಲ್ಲಿ ಹೈಟೆಕ್ 'ಸ್ಪೀಡ್ ರೇಡಾರ್ ಕೆಮರಾ: ಕೇವಲ 6 ಕ್ಯಾಮರಾಕ್ಕೆ ಒಂದು ವಾರದಲ್ಲಿ 46 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್

ಉಡುಪಿಯಲ್ಲಿ ಹೈಟೆಕ್ 'ಸ್ಪೀಡ್ ರೇಡಾರ್ ಕೆಮರಾ: ಕೇವಲ 6 ಕ್ಯಾಮರಾಕ್ಕೆ ಒಂದು ವಾರದಲ್ಲಿ 46 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್

ಡುಪಿ ಮೇ 28: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳು ಮತ್ತು ಅತಿವೇಗದ ಚಾಲನೆಗೆ ಕಡಿವಾಣ ಹಾಕಲು ಪೊಲೀಸರು ಅಳವಡಿಸಿರುವ ಹೈಟೆಕ್ 'ಸ್ಪೀಡ್ ರೇಡಾರ್ ಕೆಮರಾ'ಗಳು ಉಲ್ಲಂಘನೆಕಾರರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ.
ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ತಂತ್ರಜ್ಞಾನ ಹೊಂದಿರುವ ಕೇವಲ 6 ಕೆಮರಾಗಳ ಮೂಲಕ ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 46,753 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಗಂಭೀರ ಸ್ವರೂಪದ 235 ಪ್ರಕರಣಗಳಿಗೆ ಈಗಾಗಲೇ ದಂಡ ಪಾವತಿಸುವಂತೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲೆಯ ಪ್ರಮುಖ 6 ವಲಯಗಳಾದ ರಾಜ್ಯ ಹೆದ್ದಾರಿಯ ಕಾರ್ಕಳ-ದೂಪದಕಟ್ಟೆ, ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರಿ-ಉಚ್ಚಿಲ, ಕಾಪು-ದಂಡತೀರ್ಥ, ಕೋಟ-ತೆಕ್ಕಟ್ಟೆ, ಗಂಗೊಳ್ಳಿ-ತ್ರಾಸಿ ಮತ್ತು ಬೈಂದೂರು-ನಾಯ್ಕನಕಟ್ಟೆ ನಡುವೆ ಈ ಅತ್ಯಾಧುನಿಕ ಕೆಮರಾಗಳನ್ನು ಅಳವಡಿಸಲಾಗಿದೆ. ಕಳೆದ ಒಂದು ವಾರದಲ್ಲಿ ಈ ಮಾರ್ಗಗಳಲ್ಲಿ ಒಟ್ಟು 3,99,319 ವಾಹನಗಳು ಸಂಚರಿಸಿದ್ದು, ಈ ಪೈಕಿ 46,753 ವಾಹನಗಳು ನಿಯಮ ಗಾಳಿಗೆ ತೂರಿವೆ.

ಸದ್ಯಕ್ಕೆ ಪ್ರಾಯೋಗಿಕವಾಗಿ ತಪ್ಪುಗಳನ್ನು ಪರಿಶೀಲಿಸಿ 235 ವಾಹನ ಸವಾರರಿಗೆ ಚಲನ್ ಕಳುಹಿಸಲಾಗಿದ್ದು, ವಾರದೊಳಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಲು ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಇನ್ನೂ 14 ಸ್ಪೀಡ್ ರೇಡಾರ್ ಕೆಮರಾಗಳು ಬರಲಿದ್ದು, ಇವುಗಳನ್ನು ಜಿಲ್ಲೆಯ ಇತರೆ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುವುದು ಎಂದು ಕಂಟ್ರೋಲ್ ರೂಂ ಪಿಎಸ್‌ಐ ಅಜ್ಮಲ್ ಇಬ್ರಾಹಿಂ ಇ.ಎ. ತಿಳಿಸಿದ್ದಾರೆ.ಪೊಲೀಸರ ಡೇಟಾಬೇಸ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ವಿವರ ಹೀಗಿದೆ: ಲಘು ವಾಹನಗಳ ಅತಿ ವೇಗ- 29,484+, ಸೀಟ್ ಬೆಲ್ಟ್ ಧರಿಸದಿರುವುದು- 12,184+, ಹೆಲ್ಮೆಟ್ ರಹಿತ ಚಾಲನೆ- 11,396+, ರಾಂಗ್ ಸೈಡ್ ಚಾಲನೆ- 2,677+, ಟ್ರಿಪಲ್ ರೈಡಿಂಗ್- 2,393+, ಹೆವಿ ವೆಹಿಕಲ್ಸ್ ಅತಿ ವೇಗ- 2,279+ ಹಾಗೂ ಸಾಮಾನ್ಯ ವೇಗ ಉಲ್ಲಂಘನೆಗೆ ಸಂಬಂಧಿಸಿದಂತೆ 1,109 ಪ್ರಕರಣಗಳು ದಾಖಲಾಗಿವೆ. ವಾರದಲ್ಲಿ ಸಂಚರಿಸಿದ ವಾಹನಗಳಲ್ಲಿ 1.49 ಲಕ್ಷಕ್ಕೂ ಹೆಚ್ಚು SUVಗಳು ಹಾಗೂ 1.19 ಲಕ್ಷಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳು ಸೇರಿವೆ. ಪ್ರದೇಶವಾರು ಉಲ್ಲಂಘನೆಯಲ್ಲಿ ಪಡುಬಿದ್ರಿ (13,681+) ಮೊದಲ ಸ್ಥಾನದಲ್ಲಿದ್ದರೆ, ಕಾರ್ಕಳ (9,696+) ಮತ್ತು ಕಾಪು (8,005+) ನಂತರದ ಸ್ಥಾನದಲ್ಲಿವೆ.ಈ ಹೈಟೆಕ್ ಕೆಮರಾಗಳು 'ಎವರೇಜ್ ಸ್ಪೀಡ್ ವಯೋಲೇಶನ್‌' (Average Speed Violation) ತಂತ್ರಜ್ಞಾನ ಹೊಂದಿವೆ.

ಚಾಲಕರು ಕೆಮರಾ ಕಣ್ಣಿಗೆ ಹೆದರಿ ಅದರ ಮುಂದೆ ಮಾತ್ರ ಸ್ಲೋ ಆಗಿ, ಎರಡು ಕೆಮರಾಗಳ ಮಧ್ಯದ ರಸ್ತೆಯಲ್ಲಿ ಅತಿವೇಗವಾಗಿ ಚಲಿಸಿದರೂ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಪಾಯಿಂಟ್‌ನಿಂದ ಮತ್ತೊಂದು ಪಾಯಿಂಟ್‌ ತಲುಪಲು ಬೇಕಾಗುವ ನಿಗದಿತ ಸಮಯವನ್ನು ಆಧರಿಸಿ ಈ ಕೆಮರಾಗಳು ಸರಾಸರಿ ವೇಗವನ್ನು ಲೆಕ್ಕ ಹಾಕಿ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸುತ್ತವೆ.ಹೊರರಾಜ್ಯದ ವಾಹನಗಳು ನಿಯಮ ಉಲ್ಲಂಘಿಸಿದರೆ ಅವರು ಉಡುಪಿಗೆ ಬಂದು ದಂಡ ಪಾವತಿಸುವುದು ಕಡ್ಡಾಯವಾಗಿದೆ. ಇದನ್ನು ಇನ್ನಷ್ಟು ಸುಲಭಗೊಳಿಸಲು ಶಿರೂರು ಹಾಗೂ ಪಡುಬಿದ್ರಿ ಟೋಲ್‌ಗೇಟ್‌ಗಳಲ್ಲಿ ಚಲನ್ ಪಾವತಿ ವ್ಯವಸ್ಥೆ ಮಾಡಲಾಗುತ್ತಿದೆ. ಕೆಮರಾದಲ್ಲಿ ನಿಯಮ ಉಲ್ಲಂಘನೆ ಪತ್ತೆಯಾದ ತಕ್ಷಣ ಹೊರರಾಜ್ಯದ ವಾಹನ ಮಾಲೀಕರಿಗೆ ಮೆಸೇಜ್ ಹೋಗಲಿದ್ದು, ಮುಂದಿನ ಟೋಲ್‌ಗೇಟ್ ತಲುಪುವಷ್ಟರಲ್ಲಿ ಅವರು ದಂಡ ಕಟ್ಟಿಯೇ ಮುಂದೆ ಸಾಗಬೇಕಾದ ಡಿಜಿಟಲ್ ಯೋಜನೆಯನ್ನು ರೂಪಿಸಲಾಗುತ್ತಿದೆ
Dailyhunt
Disclaimer: This content has not been generated, created or edited by Dailyhunt. Publisher: themangaloremirror