ಬೆಂಗಳೂರು: ಅಧಿಕಾರ ವಹಿಸಿಕೊಂಡ ತಕ್ಷಣ ತ್ವರಿತ ಮತ್ತು ನಿರ್ಣಾಯಕ ಕ್ರಮ ತೀರ್ಮಾನ ತೆಗೆದುಕೊಂಡ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (Chief Minister DK Shivakumar) ರಾಜ್ಯಾದ್ಯಂತ "ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ" ಬಸ್ ಪಾಸ್‌ಗಳನ್ನು ಉಚಿತವಾಗಿ (Free Bus Passes)ನೀಡುವುದಾಗಿ ಘೋಷಿಸಿದರು.
ತಮ್ಮ ಚೊಚ್ಚಲ ಸಚಿವ ಸಂಪುಟದ ಅವಧಿಯಲ್ಲಿ, ಉಚಿತ ಸಾರಿಗೆ ಸೌಲಭ್ಯವನ್ನು ಹುಡುಗಿಯರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ, ಅದಕ್ಕಾಗಿಯೇ ಈ ವಿಸ್ತರಣೆಯನ್ನು ಘೋಷಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. ಇದು ಜಾರಿಗೆ ಬಂದ ನಂತರ ವಿದ್ಯಾರ್ಥಿಗಳು ಈ ಪಾಸ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಜೊತೆಗೆ ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ, 2,500 ಚದರ ಅಡಿವರೆಗೂ ಒಸಿ ವಿನಾಯಿತಿ, 2,500 ಚ.ಅಡಿ ವಿಸ್ತೀರ್ಣ ಕಟ್ಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್, ಪ್ರತಿ ಪಂಚಾಯತ್ ಗೂ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿರ ರೂಪಾಯಿ ಘೋಷಣೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿದ್ದವರಿಗೆ ಪ್ರೈವೇಟ್ ಎಂಪ್ಲಾಯಿಮೆಂಟ್ ಎಕ್ಸ್‌ಚೇಂಕ್ ಸೆಂಟರ್ ಸ್ಥಾಪನೆ, ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ ಮಾಡಿ ಆರಂಭದಲ್ಲೇ ಸಾಕಷ್ಟು ಜನರ ಮುಖದಲ್ಲಿ ಸಂತಸ ತಂದಿದ್ದಾರೆ.
ಯುವ ಯುಗ
"ಇದು ಯುವ ಯುಗ. ಕೇವಲ ಹುಡುಗಿಯರಿಗೆ ಉಚಿತ ಬಸ್ ಏಕೆ ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದರು?. ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಪಾಸ್‌ಗಳನ್ನು ನೀಡುತ್ತಿದ್ದೇವೆ - ಯಾವುದೇ ಶುಲ್ಕವಿಲ್ಲದೆ ಉಚಿತ ಬಸ್ ಪಾಸ್. ಎಲ್ಲಾ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತ. ಇದು ಡಿಕೆ ಶಿವಕುಮಾರ್ ಸಚಿವ ಸಂಪುಟದ ಮೊದಲ ನಿರ್ಧಾರ. ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬೇಕು, ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗುವುದು," ಎಂದು ಅವರು ಹೇಳಿದ್ದಾರೆ.
ಹಾಗೆಯೇ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ನಾವು ಕಂಪನಿಗಳೊಂದಿಗೆ ಮಾತನಾಡಿ ಅವರಿಗೆ ಅಗತ್ಯವಿರುವ ಉದ್ಯೋಗಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಹೇಳಿದರು.
ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ
ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. "ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ, ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. 'ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ' ಎಂಬ ಮಾತನ್ನು ನಂಬಿರುವವನು ನಾನು. ನಾವು ನಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ. ಇಂದು ಹೊಸ ದಿನ. ಹೊಸ ಕೆಲಸ ಮಾಡಿ, ಹೊಸ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ನೀಡಿದ್ದಾರೆ. ಬಾಕಿ ಇರುವ 2 ವರ್ಷಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಏನೆಲ್ಲಾ ಸೇವೆ ಮಾಡಬಹುದು, ರಾಜ್ಯದ ಕಲ್ಯಾಣಕ್ಕೆ ನಾನು ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ" ಎಂದು ತಿಳಿಸಿದರು.
ಹೈಕಮಾಂಡ್ ನಾಯಕರು ತೆರೆ ಎಳೆದಿದ್ದಾರೆ
ಮಾಧ್ಯಮಗಳು ಇಷ್ಟು ದಿನ ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ ವಿಚಾರವಾಗಿ ಅನೇಕ ಸುದ್ದಿ, ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದವು. ಮಲಗಿದ್ದವರನ್ನು ಎಬ್ಬಿಸಿ, ಎದ್ದಿದ್ದವರನ್ನು ಮಲಗಿಸುತ್ತಿದ್ದರು. ನಮ್ಮ ಪಕ್ಷದ ವರಿಷ್ಠರು ಇದಕ್ಕೆಲ್ಲ ಈಗ ತೆರೆ ಎಳೆದಿದ್ದಾರೆ. ಶುಭ ಗಳಿಗೆ, ಶುಭ ಮುಹೂರ್ತ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳುತ್ತಲೇ ಇದ್ದೆ. ಇಂದು ಸಂಜೆ 4.15ಕ್ಕೆ ಶುಭ ಗಳಿಗೆ, ಶುಭ ಮುಹೂರ್ತಕ್ಕೆ ಮಾಧ್ಯಮಗಳು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ ಎಂದರು.
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ
ರಾಜ್ಯದ ಜನತೆಗೆ ನನ್ನ ಮೇಲೆ ಅಪಾರ ವಿಶ್ವಾಸ ಇದೆ. ಹಿಂದೆ ಅನೇಕ ಟೀಕೆ, ಹೊಗಳಿಕೆ ವ್ಯಕ್ತವಾಗಿರಬಹುದು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಹೇಳಿದ್ದೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪ್ರಯತ್ನ ಮಾಡುತ್ತೇನೆ. 1985ರಿಂದ ಇಲ್ಲಿಯವರೆಗೂ ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ನೋಡಿದ್ದೇನೆ. ಅನೇಕ ರಾಜಕೀಯ ತಂತ್ರಗಳ ಬಲೆಗೆ ಬಿದ್ದಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ನಾನು ಎಂದಿಗೂ ಎದೆಗುಂದಲಿಲ್ಲ. ನಾನು ಭರವಸೆಗಳ ಮೇಲೆ ಬದುಕಿದೆ. ಇದೇ ವಿಶ್ವಾಸ ಮತ್ತೆ ರಾಜ್ಯದ ಜನರ ಸೇವೆ ಮಾಡಿ, ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ
ಕಾಂಗ್ರೆಸ್ ಕಾರ್ಯಕರ್ತರು, ಜನರು ಬಹಳ ನಂಬಿಕೆಯಿಂದ ಕೊಟ್ಟಿರುವ ಅವಕಾಶ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಈ ತೀರ್ಮಾನ ಮಾಡಿದ್ದಾರೆ. ಇದು ಸ್ವಲ್ಪ ತಡವಾಗಿದೆ. ಆದರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ಹೇಳುತ್ತಲೇ ಇದ್ದರು. ನಮ್ಮ ವರಿಷ್ಠರು ನಮ್ಮಿಬ್ಬರನ್ನು ಕರೆಸಿ ಈ ತೀರ್ಮಾನ ಮಾಡಿದಾಗ, ಸಿದ್ದರಾಮಯ್ಯ ಅವರು ಬಹಳ ಸಂತೋಷದಿಂದ ನನಗೆ ಜಾಗ ಮಾಡಿಕೊಟ್ಟಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಜವಾಬ್ದಾರಿ ನೀಡಿದ್ದಾರೆ.
ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ
ಗ್ರಾಮೀಣ ಭಾಗದ ರೈತರ ಪರಿಸ್ಥಿತಿ ಹಾಗೂ ನಗರ ಪ್ರದೇಶ ಜನರ ಸಮಸ್ಯೆ ನಾನು ಅರಿತಿದ್ದೇನೆ. 42% ಜನ ನಗರದಲ್ಲಿದ್ದಾರೆ. ಜನ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಬೀದಿ ವ್ಯಾಪಾರ ಮಾಡಿಕೊಂಡಾದರೂ ಒಳ್ಳೆಯ ಬದುಕು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ವ್ಯವಸಾಯ ತೊರೆದು ನಗರಗಳತ್ತ ಬರುತ್ತಿದ್ದಾರೆ. ಈ ಸರ್ಕಾರದ ಪ್ರತಿ ತೀರ್ಮಾನ ಕೇವಲ ಶಿವಕುಮಾರ್ ತೀರ್ಮಾನ ಮಾತ್ರವಲ್ಲ. ಸಾಮೂಹಿಕ ತೀರ್ಮಾನವಾಗಿರುತ್ತದೆ. ನನಗೆ ಜಾತಿ ಮೇಲೆ, ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ನಮ್ಮದೇ ಆದ ನಂಬಿಕೆ ಇರಬಹುದು. ಆದರೆ ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು ಎಂದು ತಿಳಿಸಿದರು.
ನಾನು 7ನೇ ತರಗತಿಯಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ನಾನು ಪ್ರಜಾಸತಾತ್ಮಕ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇನೆ. ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ನಮ್ಮ ಸಚಿವ ಸಂಪುಟ ಪ್ರತಿಬಿಂಬಿಸುತ್ತಿದೆ. ಮಾಧ್ಯಮಗಳು ಟೀಕೆ ಮಾಡಲಿ, ನಮ್ಮ ಸರ್ಕಾರದ ತಪ್ಪನ್ನು ತಿದ್ದಿ. ಆದರೆ ಇಲ್ಲಸಲ್ಲದ ರಾಜಕೀಯ ಸುದ್ದಿಗಳನ್ನು ಮಾಡಬೇಡಿ. ನೀವು ನನ್ನನ್ನು ಟೀಕೆ ಮಾಡಿದಾಗ ನಾನು ಪ್ರಶ್ನೆ ಮಾಡಿಲ್ಲ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ತೋರಿಸುವುದನ್ನು ಜನ ನೋಡುತ್ತಾರೆ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನೀವು ವರದಿ ಮಾಡಿ" ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶಿವಕುಮಾರ್ ಕರ್ನಾಟಕದ 34 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಹಿರಿಯ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, 13 ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಲಾಯಿತು.
MLC Elections: ವಿಧಾನ ಪರಿಷತ್‌ಗೆ ಅಭ್ಯರ್ಥಿಗಳ ಹೆಸರು ಪ್ರಕಟ! KPCC ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೇಶಾದ್ಯಂತದ ಹಿರಿಯ ಕಾಂಗ್ರೆಸ್ ನಾಯಕರು, ಧಾರ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶಿವಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು ಮತ್ತು ಕೇಂದ್ರದಿಂದ ಬೆಂಬಲದ ಭರವಸೆ ನೀಡಿದ್ದಾರೆ.
"ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಜಿ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಜನರ ಕಲ್ಯಾಣಕ್ಕಾಗಿ ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ" ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಅಭಿನಂದನೆ ಸಲ್ಲಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ. "ಕರ್ನಾಟಕದ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ, ಮತ್ತು ಆ ನಂಬಿಕೆ ನಮ್ಮ ದೊಡ್ಡ ಜವಾಬ್ದಾರಿಯಾಗಿ ಉಳಿದಿದೆ. ಕರ್ನಾಟಕದ ಜನರ ಆಕಾಂಕ್ಷೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಜಿ ಮತ್ತು ಸಚಿವ ಸಂಪುಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಕರ್ನಾಟಕವನ್ನು ಬಲಪಡಿಸಿದ ಮತ್ತು ಲಕ್ಷಾಂತರ ಜನರ ಜೀವನವನ್ನು ಸುಧಾರಿಸಿದ ನಾಯಕತ್ವ ಮತ್ತು ಸೇವೆಯಿಂದ ಶ್ರೀ ಸಿದ್ದರಾಮಯ್ಯ ಜಿ ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು" ಎಂದು ಗಾಂಧಿ ಹೇಳಿದರು.
Read more news like this on kannada.timesnownews.com

