TV5 ಸ್ಪೆಷಲ್
ಬ್ಲಾಕ್ಬಸ್ಟರ್ ಜನುಮದ ಜೋಡಿಗೆ 24 ವರ್ಷದ ಸಂಭ್ರಮ

ಕೆಲವು ಸಿನಿಮಾಗಳೇ ಹಾಗೇ. ವರ್ಷಗಳೇ ಉರುಳಿದ್ರೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೇ ಉಳಿದಿರುತ್ತೆ. ಚಿತ್ರರಂಗದಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತೆ. ಎಷ್ಟು ಬಾರಿ ನೋಡಿದ್ರೂ, ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ. ಹಾಡುಗಳನ್ನ ಇಂದಿಗೂ ಗುನುಗ್ತಾನೇ ಇರ್ತಾರೆ ಅಂತಹ ಸಿನಿಮಾಗಳಲ್ಲೊಂದು ಜನುಮದ ಜೋಡಿ. ಸದ್ಯ ಜನುಮದ ಜೋಡಿಗೆ 24 ವರ್ಷಗಳ ಸಂಭ್ರಮ.
ಸೆಂಚೂರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ ಜನುಮದ ಜೋಡಿಗೆ ಇಂದು 24 ವರ್ಷಗಳ ಸಂಭ್ರಮ. 1996 ನವೆಂಬರ್ 15ರಂದು ತೆರೆಕಂಡಿದ್ದ ಈ ಚಿತ್ರ ಸ್ಯಾಂಡಲ್ವುಡ್ನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಶಿವಣ್ಣ, ಶಿಲ್ಪಾ, ಪವಿತ್ರಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಹೊನ್ನವಳ್ಳಿ ಕೃಷ್ಣ, ಕರಿಬಸವಯ್ಯ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಜನುಮದ ಜೋಡಿ ಸಿನಿಮಾ ತೆರೆಕಂಡು ವರ್ಷಗಳೇ ಉರುಳಿಹೋದ್ರೂ, ಇಂದಿಗೂ ಜನ ಈ ಚಿತ್ರವನ್ನ ಮರೆತಿಲ್ಲ. ಹಾಡುಗಳನ್ನ ಮರೆತಿಲ್ಲ. ಆ ಕಾಲಕ್ಕೆ ಸೂಪರ್ಡೂಪರ್ ಹಿಟ್ ಲಿಸ್ಟ್ ಸೇರಿದ ಜನುಮದ ಜೋಡಿಯನ್ನ ಎಷ್ಟು ಸಲ ನೋಡಿದ್ರೂ, ಬೇಸರ ತರಿಸೋಲ್ಲ. ಜನುಮದ ಜೋಡಿ ಕಾಂದಬರಿ ಆಧಾರಿತ ಸಿನಿಮಾ ಆಗಿದ್ದು, ಮೇಲು-ಕೀಳು ಜಾತಿಯ ನಡುವೆ ಅರಳೋ ಪ್ರೀತಿ, ಪ್ರೀತಿಗೆ ಊರವರ ವಿರೋಧ, ವಿರೋಧದ ನಡುವೆಯೂ ಹೇಗೆ, ಯಾವ ಪರಿಸ್ಥಿತಿಯಲ್ಲಿ ಈ ಜೋಡಿ ಒಂದಾಗುತ್ತೆ ಅನ್ನೋದೇ ಚಿತ್ರದ ಕಥೆ.
ಅಂದ್ಹಾಗೇ ಈ ಚಿತ್ರಕ್ಕೆ ಟಿ.ಎಸ್ ನಾಗಾಭರಣ ನಿರ್ದೇಶನವಿದ್ದು, ಹ್ಯಾಟ್ರಿಕ್ ಹೀರೋ ಶೀವರಾಜ್ಕುಮಾರ್ ಹಳ್ಳಿಯ ಮುಗ್ಧ ಯುವಕ ಕೃಷ್ಣ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದರು. ಮಲೆಯಾಳಂನಲ್ಲಿ ಗುರುತಿಸಿಕೊಂಡಿದ್ದ ನಟಿ ಶಿಲ್ಪಾ ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದರು. ಅಂದ್ಹಾಗೇ ಚಿತ್ರಕ್ಕೆ ಬರೋಬ್ಬರಿ 9 ಹಾಡುಗಳನ್ನ ಕೊಟ್ಟಿದರು ಸಂಗೀತ ನಿರ್ದೇಶಕ ವಿ.ಮನೋಹರ್. 9 ಹಾಡುಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಇಂದಿಗೂ ಮಣಿ ಮಣಿ, ಇವನ್ಯಾರ ಮಗನೋ ಎವರ್ಗ್ರೀನ್ ಸಾಂಗ್ಸ್ ಆಗಿವೆ.
ಜನುಮದ ಜೋಡಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುವ ಜೊತೆಗೆ ಸಾಕಷ್ಟು ಅವಾರ್ಡ್ಗಳನ್ನ ಮುಡಿಗೇರಿಸಿಕೊಂಡಿದೆ. ನಟಿ ಶಿಲ್ಪಾ ಮೊದಲ ಕನ್ನಡ ಸಿನಿಮಾದಲ್ಲೇ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ಸಾಕಷ್ಟು ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಜನುಮದ ಜೋಡಿ ಗೆದ್ದಿದೆ. ಹುಬ್ಬಳ್ಳಿ, ಬಿಜಾಪುರ ಹಾಗೂ ಬೆಳಗಾವಿಯ ಥಿಯೇಟರ್ಗಳಲ್ಲಿ ಈ ಸಿನಿಮಾ ಒಂದು ವರ್ಷಕ್ಕೂ ಅಧಿಕ ಪ್ರದರ್ಶನ ಕಂಡಿದ್ದು ವಿಶೇಷ.