Saturday, 01 Aug, 11.24 pm TV5 ಕನ್ನಡ

TV5 ಸ್ಪೆಷಲ್
ಕರುನಾಡ ರಾಬಿನ್​ ಹುಡ್​ ಅವತಾರದಲ್ಲಿ ದರ್ಶನ್​ ದರ್ಬಾರ್..!

ಹಬ್ಬದ ಸಂಭ್ರಮದಲ್ಲಿ ಡಿ ಬಾಸ್​ ಅಭಿಮಾನಿಗಳಿಗೆ ರಾಬರ್ಟ್​ ಟೀಂ, ಬೊಂಬಾಟ್​ ನ್ಯೂಸ್​ ಕೊಟ್ಟಿದೆ. ಆದರೆ, ಇದು ರಾಬರ್ಟ್​ ಚಿತ್ರಕ್ಕೆ ಸಂಬಂಧಿಸಿದ ಅಪ್ಡೇಟ್​​ ಅಲ್ಲವೇ ಅಲ್ಲ. ಬದಲಿಗೆ ಮತ್ತೊಂದು ಹೊಸ ಸಿನಿಮಾ ಸಮಾಚಾರ. ಅಂತೆಕಂತೆ ಸುದ್ದಿಗಳಿಗೆಲ್ಲಾ ಬ್ರೇಕ್​ ಬಿದ್ದಿದೆ. ಸಿಂಧೂರ ಲಕ್ಷ್ಮಣನಾಗಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೆರೆಮೇಲೆ ಬ್ರಿಟಿಷರ ವಿರುದ್ಧ ಕದನಕ್ಕಿಳಿಯೋದು ಕನ್ಫರ್ಮ್​​ ಆಗಿದೆ.

ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿ ಸೈ ಅನ್ನಿಸಿಕೊಂಡಿರೋ ಚಾಲೆಂಜಿಂಗ್​​​ ಸ್ಟಾರ್ ಸದ್ಯ ಮದಕರಿ ನಾಯಕನಾಗಿ ದರ್ಬಾರ್​ ಮಾಡೋಕ್ಕೆ ಹೊರಟಿರೋದು ಗೊತ್ತೇಯಿದೆ. ಈ ಮಧ್ಯೆ ದರ್ಶನ್​ ಮಗದೊಂದು ಐತಿಹಾಸಿಕ ಪಾತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಕೆಲ ದಿನಗಳ ಹಿಂದೆಯೇ ಡಿ ಬಾಸ್​​ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ನಟಿಸೋ ಸುದ್ದಿ ಕೇಳಿಬಂದಿತ್ತು. ಆದರೆ, ಅದೆಲ್ಲ ಬರೀ ಅಂತೆ ಕಂತೆ ಸುದ್ದಿಯಾಗಿಯೇ ಉಳಿದಿತ್ತು. ಆದ್ರೀಗ ಅದು ಅಧಿಕೃತವಾಗಿದೆ. ಸಿಂಧೂರ ಲಕ್ಷ್ಮಣ ಸಿನಿಮಾ ಪ್ರೀಪ್ರೊಡಕ್ಷನ್​ ವರ್ಕ್​ ಸ್ಟಾರ್ಟ್​ ಆಗಿದೆ.

ಒಂದು ಕಥೆಗೆ ನಾಲ್ಕೈದು ಹೀರೋಗಳ ಹೆಸ್ರು ಕೇಳಿಬರೋದು, ಘೋಷಣೆಯಾದ ಸಿನಿಮಾಗಳು ನಿಂತೇ ಹೋಗೋದು, ಯಾರೋ ಮಾಡ್ಬೇಕಿದ್ದ ಪಾತ್ರ ಮತ್ತೊಬ್ಬರ ಪಾಲಾಗೋದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಹಾಗ್​ ನೋಡಿದ್ರೆ, ಸಿಂಧೂರ ಲಕ್ಷ್ಮಣನ ಚಿತ್ರವನ್ನ ಸುದೀಪ್​ ಮಾಡಬೇಕಿತ್ತು. ಕಾರಣಾಂತರಗಳಿಂದ ಅದು ಕಿಶೋರ್​ ಅವರಿಗೆ ಒಲಿದಿತ್ತು. ಇನ್ನೇನು ಶೂಟಿಂಗ್​ ಶುರುವಾಗಬೇಕು ಅಂದುಕೊಳ್ಳುವಷ್ಟರಲ್ಲಿ ಶೂರ ಸಿಂಧೂರ ಲಕ್ಷ್ಮಣ ಸಿನಿಮಾ ನಿಂತು ಹೋಗಿತ್ತು. ಆದ್ರೀಗ ಆ ಕಥೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​​​ ಅಂಗಳಕ್ಕೆ ಬಂದಿದೆ. ದರ್ಶನ್,​ ಸಿಂಧೂರ ಲಕ್ಷ್ಮಣನಾಗಿ ಬಣ್ಣ ಹಚ್ಚೋದು ಇದೀಗ ಖಾತ್ರಿಯಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಐತಿಹಾಸಿಕ ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಲಾಕ್​ಡೌನ್​ ಸಮಯದಲ್ಲೇ ಸದ್ದಿಲ್ಲದೇ ಚಿತ್ರದ ಸ್ಕ್ರಿಪ್ಟ್​​ ವರ್ಕ್​ ಶುರುವಾಗಿದೆ. ಈ ವಿಚಾರವನ್ನ ಖುದ್ದು ತರುಣ್​ ಸುಧೀರ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸರ್ಪ್ರೈಸ್​ ನ್ಯೂಸ್​ ಕೇಳಿ ಡಿ ಬಾಸ್​ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣನಾಗಿ ಐತಿಹಾಸಿಕ ಪಾತ್ರದಲ್ಲಿ ದುರ್ಯೋಧನನಾಗಿ ಪೌರಾಣಿಕ ಪಾತ್ರದಲ್ಲಿ ಮಿಂಚಿರೋ ದರ್ಶನ್​ ಮದಕರಿ ನಾಯಕರಾಗಿ ಮತ್ತೆ ಐತಿಹಾಸಿಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಮತ್ತೆ ಐತಿಹಾಸಿಕ ವೀರನ ಪಾತ್ರದಲ್ಲಿ ದರ್ಶನ್ ನಟಿಸ್ತಿರೋ ವಿಶೇಷ.

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ದರ್ಶನ್​ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಲಕ್ಷ್ಮಣ ತನ್ನದೇ ಆದ ರೀತಿಯಲ್ಲಿ ಆಂಗ್ಲ ಸರ್ಕಾರದ ವಿರುದ್ಧ ಸಮರ ಸಾರಿದ ವೀರ. ಈಗಿನ ಮಹಾರಾಷ್ಟ್ರದಲ್ಲಿರುವ ಜತ್ತ ಸಂಸ್ಥಾನದ ಸಿಂಧೂರಿನಲ್ಲಿ ಜನಿಸಿದ ಲಕ್ಷ್ಮಣ ಸಣ್ಣ ವಯಸ್ಸಿನಲ್ಲೇ ದೊಡ್ಡ ಮಟ್ಟದ ಕ್ರಾಂತಿ ಮಾಡಿದ ವೀರ. ಬ್ರಿಟೀಷರಿಂದ ಮತ್ತು ನಿರ್ದಯಿ ಶ್ರೀಮಂತರಿಂದ ದೋಚಿ ಬಡವರಿಗೆ, ಅಸಹಾಯಕರಿಗೆ ಹಂಚಿ ಬಡವರ ಬಂಧು ಅಂತ್ಲೇ ಲಕ್ಷ್ಮಣ ಮನೆಮಾತಾಗಿದ್ದ.

ತಮ್ಮ ವಿರುದ್ಧ ತಿರುಗಿ ಬಿದ್ದ ಲಕ್ಷ್ಮಣನನ್ನ ಬ್ರಿಟೀಷರ ಕುತಂತ್ರದಿಂದ ಕೊಂದು ಹಾಕಿದ್ರು.. ಬಿಜಾಪುರ ಭಾಗದ ಲಾವಣಿಕಾರರ ಬಾಯಲ್ಲಿ ಇಂದಿಗೂ ಲಕ್ಷ್ಮಣನ ಹೋರಾಟಗಳು ಜೀವಂತವಾಗಿದೆ. ಸಿಂಧೂರ ಲಕ್ಷ್ಮಣನೆಂದರೆ ಸಾಕು ಅಲ್ಲಿನ ಜನರ ಮೈ ರೋಮಾಂಚನವಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ಸಿಂಧೂರ ಲಕ್ಷ್ಮಣ ಯುವಕರ ತಂಡ ಕಟ್ಟಿಕೊಂಡು ಕ್ರಾಂತಿಯ ಕಿಚ್ಚು ಹಚ್ಚಿದ್ದ. ಭಾರತದಲ್ಲಿ ಅಸಹಕಾರ ಚಳುವಳಿ ಆರಂಭವಾದಾಗ ಲಕ್ಷ್ಮಣ ತನ್ನದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದನು. ಬ್ರಿಟೀಷರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಸಾಮ್ಯಾನ ವ್ಯಕ್ತಿಯಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಎಲ್ಲರಿಗೂ ಸ್ಫೂರ್ತಿಯಾಗಿದ್ದ.

ಉತ್ತರ ಕರ್ನಾಟಕದ ಜನರಿಗೆ ಸಿಂಧೂರ ಲಕ್ಷ್ಮಣ ಚಿರಪರಿಚಿತ ಹೆಸರು. 1977ರಲ್ಲೇ ಹುಣಸೂರು ಕೃಷ್ಣಮೂರ್ತಿ ಈತನ ಸಾಹಸದ ಕಥೆಯನ್ನ ಸಿನಿಮಾ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಸಿಂಧೂರ ಲಕ್ಷ್ಮಣ ಅಂದಾಕ್ಷಣ ನೆನಪಾಗೋದು ಖ್ಯಾತ ಖಳನಟ ಸುಧೀರ್​​. 1977ರಲ್ಲಿ ಬಂದ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾದಲ್ಲಿ ಸುಧೀರ್​ ನೆಗೆಟೀವ್​ ಶೇಡ್​ ರೋಲ್​ ಮಾಡಿದರು. ಆದರೆ, ಅದೇ ಸಿಂಧೂರ ಲಕ್ಷ್ಮಣನ ಕುರಿತಾದ ನಾಟಕದಲ್ಲಿ ಲಕ್ಷ್ಮಣನಾಗಿ ಸುಧೀರ್ ಸಾಕಷ್ಟು ಪ್ರದರ್ಶನಗಳನ್ನ ನೀಡಿದ್ರು. ಇದೇ ನಾಟಕ ಅವರಿಗೆ ಅಪಾರ ಹೆಸ್ರು ತಂದುಕೊಟ್ಟಿತ್ತು. ಅವರ ಮಗ ತರುಣ್​ ಸುಧೀರ್​​​ ಆ ಕಥೆಯನ್ನ ಸಿನಿಮಾ ಮಾಡೋಕ್ಕೆ ಹೊರಟಿರೋದು ವಿಶೇಷ.

ಲಕ್ಷ್ಮಣನನ್ನ ಪ್ರತ್ಯಕ್ಷವಾಗಿ ನೋಡಿದವರು ಆತ ಅಜಾನುಬಾಹು, ಸ್ಪುರದ್ರೂಪಿ ಸುಂದರಕಾಯದವನಾಗಿದ್ದ ಅಂತ ಹೇಳ್ತಿದ್ರಂತೆ. ಮಹಾಭಾರತ ಭೀಮನಿಗೆ ಹೋಲಿಸಿ ಆತನ ಶಕ್ತಿ ಸಾಮರ್ಥ್ಯವನ್ನ ಹಾಡಿ ಹೊಗಳುತ್ತಾರೆ. ಹಾಗಾಗಿ ಸಿಂಧೂರ ಲಕ್ಷ್ಮಣನ ಪಾತ್ರ ದರ್ಶನ್ ಅವರಿಗೆ ಹೇಳಿ ಮಾಡಿಸಿದಂತಿದೆ.​​​ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ಅಂತಾದೊಂದು ಪಾತ್ರದಲ್ಲಿ ನೋಡೋಕ್ಕೆ ಉತ್ಸುಕರಾಗಿದ್ದಾರೆ. ಸದ್ಯ ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಸ್ಕ್ರಿಪ್ಟ್​ ಪೂಜೆ ನೆರವೇರಿದ್ದು, ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

ತರುಣ್​ ಸುಧೀರ್​ ನಿರ್ದೇಶನದ ಹೈವೋಲ್ಟೇಜ್​ ಆಯಕ್ಷನ್​ ಸಿನಿಮಾ ರಾಬರ್ಟ್ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ ಹಾವಳಿಯಿಂದ ಥಿಯೇಟರ್​ ಬಂದ್​ ಆಗಿದ್ದು, ಯಾವಾಗ ರಾಬರ್ಟ್​ ದರ್ಬಾರ್​ ನೋಡ್ತೀವೋ ಅಂತ ಫ್ಯಾನ್ಸ್​ ಕಾಯ್ತಿದ್ದಾರೆ. ಈ ನಡುವೆ ಅದೇ ಟೀಂ ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಕೈ ಹಾಕಿರೋದು ವಿಶೇಷ. ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್​​ ಬಹಳ ರಿಸ್ಕ್​ ತಗೊಂಡು ಮತ್ತೊಂದು ಚಿತ್ರವನ್ನ ಘೋಷಿಸಿದ್ದಾರೆ. ರಾಬರ್ಟ್​ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಸಿಂಧೂರ ಲಕ್ಷ್ಮಣ ಚಿತ್ರಕ್ಕೂ ಕೆಲಸ ಮಾಡಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top