Tuesday, 18 Aug, 12.34 pm TV5 ಕನ್ನಡ

ರಾಜಕೀಯ
'ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು' - ಮಾಜಿ ಸಿಎಂ ಹೆಚ್ಡಿಕೆ ಆಗ್ರಹ

ಬೆಂಗಳೂರು: ಖಾಲಿ ಖಜಾನೆ ತುಂಬಿಕೊಳ್ಳಲು ಬಿಬಿಎಂಪಿ, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನು ಪರಬಾರೆಗೆ ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಿಟರ್​ ಮೂಲಕ ಆಗ್ರಹಿಸಿದ್ದಾರೆ.

ಮಂಗಳವಾರ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕೋವಿಡ್19 ಪರಿಸ್ಥಿತಿ ಎದುರಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರದ ಈ ನಿರ್ಧಾರ ಭವಿಷ್ಯದಲ್ಲಿ ಮುಳುವಾಗಲಿದೆ. ಕವಡೆ ಕಾಸಿಗೆ ಸ್ಥಳೀಯ ಸಂಸ್ಥೆಗಳ ಜಮೀನನ್ನು ಗುತ್ತಿಗೆ ನೀಡಿರುವ ಸರ್ಕಾರ ಮಾರಾಟ ನಿರ್ಧಾರ ಕೈಬಿಟ್ಟು, ಬಾಡಿಗೆ ಹೆಚ್ಚಿಸಲು ಮುಂದಾಗಬೇಕು ಎಂದಿದ್ದಾರೆ.

ಇನ್ನು ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುತ್ತಿಗೆ ನೀಡಿರುವ ಜಮೀನನ್ನು ಮಾರಾಟ ಮಾಡಿದರೆ, ಮುಂದೆ ಸಾರ್ವಜನಿಕ ಅವಶ್ಯಕತೆಗಳಿಗೆ ಸರ್ಕಾರಿ ಜಮೀನು ಇಲ್ಲದಂತಾಗುತ್ತದೆ. ಅಗತ್ಯ ಬಿದ್ದಾಗ ಖಾಸಗಿ ಅವರ ಎದುರು ಅಂಗಲಾಚಬೇಕಾದ ದೈನೇಸಿ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ಇದೀಗ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ನೀಡಿರುವ ಜಮೀನಿನ ಮೇಲೆ ಕಣ್ಣಿಟ್ಟಿದೆ. ಇಂತಹ ತಾತ್ಕಾಲಿಕ ಉಪಶಮನಗಳಿಂದ ಸರ್ಕಾರ ಶಾಶ್ವತವಾಗಿ ಬೊಕ್ಕಸ ತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸುಮಾರು 5,000 ಕೋಟಿ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರ ಇರುವುದನ್ನು ಕಳೆದುಕೊಳ್ಳುವ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಆಗ್ರಹಿಸುತ್ತೇನೆ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top