ದೇಶ-ವಿದೇಶ
ಸುಪ್ರೀಂ ತೀರ್ಪಿಗೆ ಸ್ವಾಗತ ಆದರೆ ಪ್ರತಿಭಟನೆ ಮುಂದುವರೆಯಲಿದೆ - ರೈತ ಮುಖಂಡರು ಸ್ಪಷ್ಟನೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ರೈತ ಮುಖಂಡರು ಸ್ವಾಗತಿಸಿದ್ದು, ಈ ಕಾನೂನುಗಳನ್ನು ರದ್ದುಗೊಳಿಸುವ ತನಕ ತಮ್ಮ ಪ್ರತಿಭಟನೆ ಮುಂದುವರೆಸುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಮುಂದೆ ಯಾವುದೇ ವಿಚಾರಣೆಯಲ್ಲಿ ಭಾಗವಹಿಸಲು ನಾವು ಸಿದ್ಧರಿಲ್ಲ. ಆದರೆ, ಈ ಕುರಿತು ಔಪಚಾರಿಕ ನಿರ್ಧಾರವನ್ನು ಮೋರ್ಚಾ ತೆಗೆದುಕೊಳ್ಳುತ್ತದೆ ಎಂದು ರೈತ ಮುಖಂಡರು ಹೇಳಿದರು.
ತಮ್ಮ ಮುಂದಿನ ನಡೆ ಕುರಿತು ನಿರ್ಧರಿಸಲು ಸುಮಾರು 40 ಪ್ರತಿಭಟನಾ ನಿರತ ರೈತ ಸಂಘಗಳನ್ನು ಹೊಂದಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಸಭೆ ಕರೆದಿದೆ.
ಕೃಷಿ ಕಾನೂನುಗಳ ಅನುಷ್ಠಾನಕ್ಕೆ ತಡೆ ನೀಡಿರುವ ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ಕಾನೂನುಗಳನ್ನು ಸಂಪೂರ್ಣವಾಗಿ ಕೈಬಿಡಕೇಂದು ನಾವು ಬಯಸುತ್ತೇವೆ ಎಂದು ಮೋರ್ಚಾದ ಹಿರಿಯ ಮುಖಂಡ ಅಭಿಮನ್ಯು ಕೊಹಾರ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠವು ಕೃಷಿ ಕಾನೂನು ಜಾರಿಗೆ ತಡೆ ನೀಡಿ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಕೃಷಿ ಕಾನೂನುಗಳ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ ಮತ್ತು ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಸಂಘಗಳು ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ.