ಪಾಟ್ನಾ: ವೈಭವ್ ಸೂರ್ಯವಂಶಿಯ ಬಳಿಕ ಬಿಹಾರ ಮತ್ತೋರ್ವ ಕ್ರಿಕೆಟ್ ಪಟು ಅಬ್ಬರ ಬ್ಯಾಟಿಂಗ್ ನಡೆಸಿದ್ದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೆ ದೂಡಿದ್ದಾರೆ. ಬಿಹಾರ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ 19 ವರ್ಷದೊಳಗಿನವರ ಏಕದಿನ ಪಂದ್ಯಾವಳಿಯಲ್ಲಿ 15 ವರ್ಷದ ಅಕ್ಷರಾ ಗುಪ್ತಾ 126 ಎಸೆತಗಳಲ್ಲಿ 306 ರನ್ ಬಾರಿಸಿದ್ದಾರೆ.
ಅಕ್ಷರಾ ಆಡಿದ ಇನಿಂಗ್ಸ್‌ನಲ್ಲಿ 55 ಫೋರ್ ಮತ್ತು 8 ಸಿಕ್ಸರ್‌ಗಳಿದ್ದು, 242.86ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 34 ಎಸೆತಕ್ಕೆ ಶತಕ ಪೂರೈಸಿದ ಅವರು 124 ಎಸೆತದಲ್ಲಿ ತ್ರಿಶತಕದ ಗಡಿ ದಾಟಿದರು. ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸುವಲ್‌ನವರಾದ ಅಕ್ಷರಾ ಬಿಹಾರ ರಾಜ್ಯದ 19 ವರ್ಷದೊಳಗಿನವರ ತಂಡದಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ.
10 ವರ್ಷದ ಬಾಲಕಿಯಾಗಿದ್ದಾಗಲೇ ಬಾಲಕರ ಸರಿಸಮವಾಗಿ ಕ್ರಿಕೆಟ್ ಆಡುತ್ತಿದ್ದ ಮಗಳ ಕೌಶಲ್ಯವನ್ನು ಮೆಚ್ಚಿದ ಅಕ್ಷರಾರ ತಂದೆ-ತಾಯಿ ಮಗಳನ್ನು ಕ್ರಿಕೆಟ್ ತರಬೇತಿಗೆ ಸೇರಿಸಿದ್ದರು. ಇದಾದ ಬಳಿಕ ಅಬ್ಬರ ಬ್ಯಾಟಿಂಗ್ ಮೂಲಕ ಹೆಸರು ಗಳಿಸಿಕೊಂಡ ಅಕ್ಷರಾ ರಾಜ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡರು. 14 ವರ್ಷವಿದ್ದಾಗ ವೈಭವ್ ಸಹ ಇಂತಹುದ್ದೇ ಅಬ್ಬರದ ಆಟದ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು.

