ಬೆಂಗಳೂರು/ಹುಬ್ಬಳ್ಳಿ/ಮಣಿಪಾಲ: ರಾಜ್ಯದಲ್ಲಿ ಬರದ ಛಾಯೆ ನಡುವೆಯೇ ಮುಂಗಾರು ಮಳೆ ಚುರುಕುಗೊಂಡಿದ್ದು 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. 13 ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, 6 ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. 5 ಸೇತುವೆಗಳು ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದೆ.
ನದಿ ತೀರದಲ್ಲಿ ಮತ್ತೆ ನೆರೆ ಭೀತಿ ಆವರಿಸಿದೆ.
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಧಾರಾಕಾರ ಮಳೆಗೆ ಕೃಷ್ಣಾ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಲೆನಾಡಿನಲ್ಲಿ ತುಂಗಾ, ಭದ್ರಾ, ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ, ತುಂಗಭದ್ರಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ರಾಜ್ಯದ ಅತಿ ಚಿಕ್ಕ ಡ್ಯಾಂ ಗಾಜನೂರು ಜಲಾಶಯ ಭರ್ತಿಯಾಗಿದೆ. ಹಿಡಕಲ್, ನವೀಲುತೀರ್ಥ, ಹಿಪ್ಪರಗಿ ತುಂಗಾ, ಭದ್ರಾ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯ ಯಡೂರ ಕಲ್ಲೋಳ ಕೆಳಹಂತದ ಸೇತುವೆ ಭಾನುವಾರ ಮಧ್ಯಾಹ್ನ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ದೂಧಗಂಗಾ ನದಿಯ ಕಾರದಗಾ ಭೋಜ, ಭೋಜವಾಡಿ ಕುನ್ನೂರ ಹಾಗೂ ವೇದಗಂಗಾ ನದಿಯ ಅಕ್ಕೋಳ ಸಿದ್ನಾಳ, ಜತ್ರಾಟ ಬೀವಸಿ ಸೇತುವೆಗಳೂ ಜಲಾವೃತವಾಗಿವೆ. ಮಹಾರಾಷ್ಟ್ರದ ಪ್ರಮುಖ ರಾಜಾಪೂರ ಜುಗಳ ಬ್ಯಾರೇಜ್ ಮೇಲೆಯೂ ನೀರು ಹರಿಯುತ್ತಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ. ವೇದಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ಜಾನುವಾರುಗಳು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ. ಕೃಷ್ಣಾ ನದಿಗೆ ಸದ್ಯ 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ.
ಹಿಡಕಲ್ ಜಲಾಶಯದಲ್ಲಿ ಏರಿಕೆ:
ಅಂಬೋಲಿ ಅರಣ್ಯ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಘಟಪ್ರಭಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದ ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಎರಡು ಅಡಿ ನೀರು ಹೆಚ್ಚಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2094 ಅಡಿ ನೀರು ಸಂಗ್ರಹವಾಗಿದ್ದು ಜಲಾಶಯಕ್ಕೆ 5377 ಕ್ಯೂಸೆಕ್ ನೀರು ಬರುತ್ತಿದೆ. ಮಲಪ್ರಭಾ ಜಲಾಶಯದಲ್ಲಿ ಸಹ ಒಳಹರಿವು ಆರಂಭವಾಗಿದೆ. ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ನದಿಯ ಮೂಲಕ ಮಲಪ್ರಭಾ ಜಲಾಶಯಕ್ಕೆ 622 ಕ್ಯೂಸೆಕ್ ನೀರು ಬರುತ್ತಿದೆ. ಒಟ್ಟು 2079.50 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2047.65 ಅಡಿ ನೀರು ಸಂಗ್ರಹವಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಸರ್ಕಾರಿ ಶಾಲೆ ಮೇಲ್ಛಾವಣಿ ಹಾರಿ ಹೋಗಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ನಗರದ ಸಿಂಪಿಗಲ್ಲಿಯಲ್ಲಿ ಮನೆ ಹಿಂಭಾಗದ ಕಾಪೌಂಡ್ ಕುಸಿದು ನಗರಸಭೆ ಮಾಜಿ ಸದಸ್ಯ ರಾಕೇಶ ತಿರುಮಲೆ ಗಾಯಗೊಂಡಿದ್ದಾರೆ. ಕುಮಟಾ ಗೋಕರ್ಣ ನಡುವೆ ಮರ ಬಿದ್ದು ಸಂಚಾರ ವ್ಯತ್ಯಯವಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಭಾರೀ ಗಾಳಿಗೆ ಮರ ಉರುಳಿ ಬಿದ್ದಿದೆ. ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬಾಗಲಕೋಟೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ಬೃಹತ್ ತಡೆಗೋಡೆ ಕುಸಿದು 2 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿ, ಮಳೆ ಸುರಿದಿದೆ.
ಗಾಜನೂರು ಡ್ಯಾಂ ಭರ್ತಿ: 10 ಗೇಟ್‌ನಲ್ಲಿ ನೀರು ಹೊರಕ್ಕೆ
ತುಂಗಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ರಾಜ್ಯದ ಅತಿಚಿಕ್ಕ ಜಲಾಶಯಗಳಲ್ಲಿ ಒಂದಾಗಿರುವ ಗಾಜನೂರಿನ ಚಿಕ್ಕ ಜಲಾಶಯ ಭರ್ತಿಯಾಗಿದ್ದರಿಂದ 10 ಗೇಟ್‌ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 588.18 ಮೀಟರ್ ತಲುಪಿದೆ. ಒಟ್ಟು 3.24 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.206 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿಗೆ 7219 ಕ್ಯೂಸೆಕ್ ಒಳ ಹರಿವು
ಕೇರಳದ ವೈನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಇರುವ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಜಲಾಶಯಕ್ಕೆ ಭಾನುವಾರ 7219 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 850 ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ಕೊಡಗಿನ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಪ್ರಸ್ತುತ ಜಲಾಶಯಕ್ಕೆ 2149 ಕ್ಯುಸೆಕ್ ಒಳಹರಿವು ಇದೆ. ಅಣೆಕಟ್ಟಿನ ಗರಿಷ್ಠ ಮಟ್ಟ 2839 ಅಡಿಗಳಾಗಿದ್ದು, ಪ್ರಸ್ತುತ 2434.58 ಅಡಿ ನೀರು ಇದೆ.

