ನ್ಯೂಯಾರ್ಕ್: ದಕ್ಷಿಣ ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 200ಕ್ಕೂ ಹೆಚ್ಚು ಭಾರತೀಯ ಶಾಂತಿಪಾಲನಾ ಪಡೆ ಸಿಬ್ಬಂದಿಗೆ ಅವರ ಅತ್ಯುತ್ತಮ ಸೇವೆಗಾಗಿ ವಿಶ್ವಸಂಸ್ಥೆಯ ಪದಕ ನೀಡಿ ಗೌರವಿಸಲಾಗಿದೆ.
ಜುಬಾದಲ್ಲಿ ನಡೆದ ಸಮಾರಂಭದಲ್ಲಿ 6 ಮಹಿಳೆಯರು ಹಾಗೂ 7 ಸಿಬ್ಬಂದಿ ಅಧಿಕಾರಿಗಳು ಸೇರಿದ ಒಟ್ಟು 210 ಭಾರತೀಯ ಶಾಂತಿಪಾಲನಾ ಪಡೆ ಸಿಬ್ಬಂದಿಗೆ ಈ ಪದಕ ಪ್ರದಾನ ಮಾಡಲಾಗಿದೆ ಎಂದು ದಕ್ಷಿಣ ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಮಿಷನ್ ತಿಳಿಸಿದೆ.
ಬಿಕ್ಕಟ್ಟುಗಳು, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ಜೀವ ರಕ್ಷಿಸುವ ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ಶಾಂತಿಪಾಲಕರ ಧೈರ್ಯ ಹಾಗೂ ಮಾನವೀಯತೆಯು ಜೀವಗಳನ್ನು ರಕ್ಷಿಸಲು ಮತ್ತು ಶಾಂತಿಯನ್ನು ನೆಲೆಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

