ಕಣ್ಣೂರು (ಕೇರಳ):43 ಕೆ.ಜಿ. ಮಾದಕವಸ್ತುಗಳನ್ನು ಸೌದಿ ಅರೇಬಿಯಾಕ್ಕೆ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಕೇರಳದ ಕಣ್ಣೂರು ಜಿಲ್ಲೆಯ 41 ವರ್ಷದ ವ್ಯಕ್ತಿಯೊಬ್ಬರನ್ನು ಸೌದಿ ಅರೇಬಿಯಾದಲ್ಲಿ ರವಿವಾರ (ಸೆ.27) ಗಲ್ಲಿಗೇರಿಸಲಾಗಿದೆ.
ಅಬೂಟ್ಟಿ ವೆಲ್ಲಿಲಿ ಎಂದು ಗುರುತಿಸಲಾಗಿದೆ.
ಥಲಶ್ಶೇರಿ ಸಮೀಪದ ಪೆರಿಂಗಾಡ್ ನಿವಾಸಿಯಾಗಿದ್ದ ಅಬೂಟ್ಟಿಗೆ ಸೌದಿ ಅರೇಬಿಯಾದ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಸೌದಿ ಗೃಹ ಸಚಿವಾಲಯದ ಪ್ರಕಾರ, ಪೂರ್ವ ಪ್ರಾಂತ್ಯದಲ್ಲಿ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
ಅಬೂಟ್ಟಿಯನ್ನು 2023ರಲ್ಲಿ ಬಂಧಿಸಲಾಗಿತ್ತು. ಅವರು ಚಲಾಯಿಸುತ್ತಿದ್ದ ಜಿಎಂಸಿ ವ್ಯಾನ್‌ನಲ್ಲಿ 43 ಕೆ.ಜಿ. ಮಾದಕವಸ್ತು ಪತ್ತೆಯಾಗಿತ್ತು. ಒಮಾನ್‌ನಿಂದ ರಸ್ತೆ ಮಾರ್ಗವಾಗಿ ಮಾದಕವಸ್ತುಗಳನ್ನು ಸೌದಿ ಅರೇಬಿಯಾಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಪ್ರಕರಣದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಆರೋಪಿಸಿತ್ತು.
ವಿಶೇಷ ನ್ಯಾಯಾಲಯವು ಅಬೂಟ್ಟಿಯನ್ನು ತಪ್ಪಿತಸ್ಥರೆಂದು ಘೋಷಿಸಿ, ವಿವೇಚನಾ ಶಿಕ್ಷೆಯಡಿ ಮರಣದಂಡನೆ ವಿಧಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳು ತೀರ್ಪನ್ನು ಎತ್ತಿಹಿಡಿದ ಬಳಿಕ, ಶಿಕ್ಷೆ ಜಾರಿಗೊಳಿಸಲು ರಾಜಾಜ್ಞೆ ಹೊರಡಿಸಲಾಗಿತ್ತು.
ಕುಟುಂಬಕ್ಕೆ ಮೃತದೇಹ ತರಲು ಸಾಧ್ಯವಾಗಿಲ್ಲ
ಅಬೂಟ್ಟಿಗೆ ಪತ್ನಿ, ಕಿಂಡರ್‌ಗಾರ್ಟನ್‌ನಲ್ಲಿ ಓದುತ್ತಿರುವ ಇಬ್ಬರು ಮಕ್ಕಳು ಹಾಗೂ ಒಬ್ಬ ಸಹೋದರಿ ಇದ್ದಾರೆ. ಇತರ ಮೂವರು ಸಹೋದರಿಯರು ವಿವಾಹವಾಗಿದ್ದಾರೆ. ಅವರ ತಂದೆ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.
ಅಬೂಟ್ಟಿ ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಉದ್ಯೋಗ ವೀಸಾ ಇಲ್ಲದೆ ಅಲ್ಲಿ ಕಾನೂನುಬದ್ಧವಾಗಿ ಚಾಲನಾ ಪರವಾನಗಿ ಪಡೆಯಲು ಸಾಧ್ಯವಿರಲಿಲ್ಲ ಎಂದು ನೆರೆಹೊರೆಯವರು ಹಾಗೂ ಪಂಚಾಯಿತಿ ಪ್ರತಿನಿಧಿ ಅಸ್ಲಂ ಚಿನ್ನನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಕರಣದ ಹಲವು ವಿಚಾರಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ. ಕಣ್ಣೂರಿನ ಸ್ನೇಹಿತರೊಬ್ಬರು ವೀಸಾ ವಿಚಾರದಲ್ಲಿ ಅಬೂಟ್ಟಿಗೆ ವಂಚನೆ ಮಾಡಿದ್ದರು ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಅಲ್ಲದೆ, ಒಮಾನ್‌ನ ಪ್ರಾಯೋಜಕರೊಬ್ಬರು ಅಬೂಟ್ಟಿಯನ್ನು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸಿದ್ದರು ಎಂಬ ಆರೋಪವೂ ಇತ್ತು ಎಂದು ಅಸ್ಲಂ ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಸೂಕ್ತ ಕಾನೂನು ನೆರವು ಪಡೆಯಲು ಅಬೂಟ್ಟಿಯ ಕುಟುಂಬಕ್ಕೆ ಆರ್ಥಿಕ ಸಾಮರ್ಥ್ಯವಿಲ್ಲ. ಹೀಗಾಗಿ ಮೃತದೇಹವನ್ನು ಕೇರಳಕ್ಕೆ ತರಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಸ್ಲಂ ಹೇಳಿದ್ದಾರೆ.

