Dailyhunt Logo
  • Light mode
    Follow system
    Dark mode
    • Play Story
    • App Story
5 ಕೋ.ರೂ. ಮೌಲ್ಯದ ಚಿನ್ನದ ರಾಮಚರಿತಮಾನಸ ಗ್ರಂಥ ನಾಪತ್ತೆ? ಮಾಜಿ ಐಎಎಸ್ ಅಧಿಕಾರಿ ಗಂಭೀರ ಆರೋಪ

5 ಕೋ.ರೂ. ಮೌಲ್ಯದ ಚಿನ್ನದ ರಾಮಚರಿತಮಾನಸ ಗ್ರಂಥ ನಾಪತ್ತೆ? ಮಾಜಿ ಐಎಎಸ್ ಅಧಿಕಾರಿ ಗಂಭೀರ ಆರೋಪ

ಅಯೋಧ್ಯೆ/ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ದುರುಪಯೋಗದ ವಿವಾದ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಮಂದಿರಕ್ಕೆ ಕಾಣಿಕೆಯಾಗಿ ನೀಡಲಾಗಿದ್ದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಲೇಪಿತ 'ರಾಮಚರಿತಮಾನಸ' ಗ್ರಂಥವನ್ನು ಮಂದಿರದಿಂದ ಬೇರೆಡೆಗೆ ಸಾಗಿಸಲಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಎಸ್.

ಲಕ್ಷ್ಮೀನಾರಾಯಣನ್ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ 2024ರ ಏಪ್ರಿಲ್‌ನಲ್ಲಿ ತಮ್ಮ ಕುಟುಂಬದ ವತಿಯಿಂದ ಈ ಪವಿತ್ರ ಗ್ರಂಥವನ್ನು 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ಗೆ ದೇಣಿಗೆಯಾಗಿ ನೀಡಲಾಗಿತ್ತು. 147 ಕೆಜಿ ತೂಕದ ಈ ಅಪರೂಪದ ಕೃತಿಯನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರವನ್ನು ಬಳಸಿ ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿತ್ತು. 522 ಪುಟಗಳ ಈ ಗ್ರಂಥದಲ್ಲಿ ಗೋಸ್ವಾಮಿ ತುಳಸಿದಾಸರ 10,902 ಶ್ಲೋಕಗಳನ್ನು ಚಿನ್ನದ ಅಕ್ಷರಗಳಲ್ಲಿ ಕೆತ್ತಲಾಗಿತ್ತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಯೂ ಆಗಿರುವ ಲಕ್ಷ್ಮೀನಾರಾಯಣನ್, "ಸುಮಾರು ಐದು ತಿಂಗಳುಗಳ ಕಾಲ ಈ ಗ್ರಂಥವನ್ನು ಭಕ್ತರ ದರ್ಶನಕ್ಕಾಗಿ ಗರ್ಭಗುಡಿಯ ಬಳಿ ಇಡಲಾಗಿತ್ತು. ಆದರೆ ನಂತರ ಅದನ್ನು ಅಲ್ಲಿಂದ ಏಕಾಏಕಿ ತೆರವುಗೊಳಿಸಲಾಗಿದೆ. ಈ ಬಗ್ಗೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಲ್ಲಿ ವಿಚಾರಿಸಿದಾಗ, 'ಮಂದಿರಕ್ಕೆ ಬರುವ ಪ್ರತಿಯೊಂದು ಕಾಣಿಕೆಯನ್ನೂ ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಸಾಧ್ಯವಿಲ್ಲ' ಎಂಬ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ವಿಷಯವಾಗಿ ಅವರು ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಪತ್ರ ಬರೆದಿದ್ದು, ಮಂದಿರದ ದೇಣಿಗೆಗಳ ಬಗ್ಗೆ ಸ್ವತಂತ್ರ ಆಡಿಟ್ (ಲೆಕ್ಕಪರಿಶೋಧನೆ) ನಡೆಸುವಂತೆ ಒತ್ತಾಯಿಸಿದ್ದಾರೆ.

ಮತ್ತೊಂದೆಡೆ, ರಾಮಮಂದಿರದ ದೇಣಿಗೆ ಕಳ್ಳತನದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಮಂದಿರದಿಂದ ಕಳವಾಗಿರುವ ಚಿನ್ನದ ಆಭರಣಗಳನ್ನು ಆರೋಪಿಗಳು ಗುರುತು ಸಿಗದಂತೆ ಮಾಡಲು ಕರಗಿಸಿ ಚಿನ್ನದ ಬಿಸ್ಕೆಟ್‌ಗಳನ್ನಾಗಿ ಪರಿವರ್ತಿಸಿರುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಕಳವಾದ ಆಭರಣಗಳ ಪತ್ತೆಗಾಗಿ ಹಲವು ಕಡೆ ದಾಳಿ ನಡೆಸಿದರೂ ಒಡವೆಗಳು ಸಿಗದ ಹಿನ್ನೆಲೆಯಲ್ಲಿ ಈ ಅನುಮಾನ ಬಲವಾಗಿದೆ.

ಉದ್ಧವ್ ಠಾಕ್ರೆ ನೀಡಿದ್ದ ಬೆಳ್ಳಿ ಇಟ್ಟಿಗೆ ಸೇಫ್:
ಈ ಹಿಂದೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದ 4 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಸೇರಿದಂತೆ ಭಾರಿ ಪ್ರಮಾಣದ ಬೆಳ್ಳಿ ಇಟ್ಟಿಗೆಗಳು ನಾಪತ್ತೆಯಾಗಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ, ಸುಮಾರು 200 ಕೆಜಿ ತೂಕದ ಈ ಬೆಳ್ಳಿ ಇಟ್ಟಿಗೆಗಳು ಸುರಕ್ಷಿತವಾಗಿದ್ದು, ಅವು ಕಳವಾಗಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani