ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ನಿಯಮ ಉಲ್ಲಂ ಸಿದ 6 ಹೋಟೆಲ್‌ಗಳಿಗೆ ಒಟ್ಟು 1.6 ಲಕ್ಷ ರೂ. ದಂಡ ವಿಧಿಸಿದ್ದಾರೆ. ಬ್ಯಾಟರಾಯನಪುರ ಮತ್ತು ಯಲಹಂಕ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳ ಮೇಲೆ ಗುರುವಾರ ತಪಾಸಣೆ ನಡೆಸಿದರು.
ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ನೋಟಿಸ್ ನೀಡಿ ದಂಡ ವಿಧಿಸಲಾಗಿದೆ.
ಪೀಪಾಯಿ ಬ್ರೂವರಿ ಆಯಂಡ್ ಕಿಚನ್ ಹೋಟೆಲ್‌ನಲ್ಲಿ ನಡೆದ ತಪಾಸಣೆಯಲ್ಲಿ ಸ್ಟೋರ್ ರೂಮ್‌ನಲ್ಲಿ ಅವಧಿ ಮೀರಿದ ಅಡುಗೆ ಎಣ್ಣೆ ಪತ್ತೆಯಾಗಿದೆ. ಕೋಲ್ಡ್ ಸ್ಟೋರೇಜ್‌ನಲ್ಲಿ ಮಾಂಸವನ್ನು ಮುಚ್ಚದೆ ಹಾಗೂ ಯಾವುದೇ ಲೇಬಲ್ ಇಲ್ಲದೆ ಸಂಗ್ರಹಿಸಲಾಗಿತ್ತು. ಮಾಂಸ ಖರೀದಿಸಿದ ದಿನಾಂಕಕ್ಕೆ ಸಂಬಂಧಿಸಿದ ಇನ್ ವಾಯ್ಸ ಕೂಡ ಅಧಿಕಾರಿಗಳಿಗೆ ತೋರಿಸಲು ಸಾಧ್ಯವಾಗಿಲ್ಲ.
ಎಫ್‌ಎಸ್‌ಎಸ್‌ಎಐ ಹಾಗೂ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 80 ಸಾವಿರ ರೂ. ದಂಡ ವಿಧಿಸಲಾಗಿದೆ.
ನೊಣಗಳ ಹಾವಳಿ, ಅಶುಚಿತ್ವ
ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ನೊಣಗಳಿರುವುದು ಪತ್ತೆಯಾಗಿ 40 ಸಾವಿರ ರೂ. ದಂಡ ವಿಧಿಸಲಾಗಿದೆ.
ಥಲಶ್ಯೇರಿ ರೆಸ್ಟೋರೆಂಟ್‌ನಲ್ಲಿ ತ್ಯಾಜ್ಯ ವಿಂಗಡಣೆ ಲೋಪ, ನೊಣಗಳ ಹಾವಳಿ, ಅಶುಚಿ ವಾತಾವರಣ ಮತ್ತು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಕಂಡುಬಂದು 20 ಸಾವಿರ ರೂ. ದಂಡ ವಿಧಿಸಲಾಗಿದೆ. ಚಿಕ್‌ಪೇಟೆ ದೋನ್ನೆ ಬಿರಿಯಾನಿಗೆ ಇದೇ ಕಾರಣಗಳಿಗಾಗಿ 5 ಸಾವಿರ ರೂ., ನಂದನಾ ಪ್ಯಾಲೇಸ್‌ಗೆ ತ್ಯಾಜ್ಯ ವಿಂಗಡಣೆಯಲ್ಲಿ ಲೋಪ, ಪ್ಲಾಸ್ಟಿಕ್ ಬಳಕೆ ಹಾಗೂ ಅಶುಚಿತ್ವ ಹಿನ್ನೆಲೆಯಲ್ಲಿ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಸ್ವಾತಿ ಹೋಟೆಲ್‌ನಲ್ಲಿ ಅಶುಚಿ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

