Dailyhunt Logo
  • Light mode
    Follow system
    Dark mode
    • Play Story
    • App Story
ಆಹ್ವಾನಕ್ಕೆ ವಿರೋಧ:ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ: ಬಿಸಿಐಗೆ ಸಿಜೆಐ ಚಾಟಿ!

ಆಹ್ವಾನಕ್ಕೆ ವಿರೋಧ:ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ: ಬಿಸಿಐಗೆ ಸಿಜೆಐ ಚಾಟಿ!

ವದೆಹಲಿ:ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಬಾರ್ ಕೌನ್ಸಿಲ್ (BCI) ಅನ್ನು ಪ್ರಶ್ನಿಸಿದೆ.

ಕಾನೂನು ನಿಯಂತ್ರಕ ಹೊರಡಿಸಿದ ಎರಡು ಸುತ್ತೋಲೆಗಳನ್ನು ಪ್ರಶ್ನಿಸಿ NALSAR ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠವು ಬಿಸಿಐಗೆ ನೋಟಿಸ್ ಜಾರಿ ಮಾಡಿತ್ತು. ಹಿರಿಯ ವಕೀಲ ಕೆ. ಪರಮೇಶ್ವರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ನ್ಯಾಯಾಲಯವು ಈ ವಿಷಯವನ್ನು ಆಲಿಸಲು ಒಪ್ಪಿಕೊಂಡಿತ್ತು.

ವಿಚಾರಣೆಯ ಸಮಯದಲ್ಲಿ, ಕಾನೂನುಬದ್ಧವಾಗಿ ಪ್ರತಿಭಟಿಸುವ ಹಕ್ಕನ್ನು ಚಲಾಯಿಸುತ್ತಿದ್ದ ವಿದ್ಯಾರ್ಥಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಲ್ಲಿ ಬಿಸಿಐ ಯಾವುದೇ ಪಾತ್ರ ಹೊಂದಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.

ಈ ವಿಚಾರದಲ್ಲಿ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಏನೂ ಮಾಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ. ವಿದ್ಯಾರ್ಥಿಗಳು ಪತ್ರ ಬರೆದದ್ದು ನನಗೆ (ಸಿಜೆಐ), ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ಸಂವಹನವಾಗಿದೆ. ಅನಗತ್ಯವಾಗಿ ಸುತ್ತೋಲೆ ಹೊರಡಿಸಲು ಅವರು ಯಾರು ಎಂದು ಸಿಜೆಐ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾಕ್ಕೆ ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.

ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಜೆಐ, "ನಾನು ಕಾಲೇಜಿನಲ್ಲಿದ್ದಾಗ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಕೆಲವೊಮ್ಮೆ, ಅವರು ತಪ್ಪು ಹೇಳುತ್ತಿದ್ದರೂ ಸಹ, ಅವರು ಕಾನೂನುಬದ್ಧವಾಗಿ ಧ್ವನಿ ಎತ್ತುತ್ತಿದ್ದರೆ, ಅದಕ್ಕೆ ಅವಕಾಶ ನೀಡಬೇಕು" ಎಂದು ಹೇಳಿದರು.

ಏನಿದು ವಿವಾದ:

ಘಟಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಪ್ರೀಂಕೋರ್ಟ್‌ ಸಿಜೆಐ ಸೂರ್ಯಕಾಂತ್‌ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿದ ಹೈದರಾಬಾದ್‌ ನ ನ್ಯಾಷನಲ್‌ ಅಕಾಡೆಮಿ ಆಫ್‌ ಲೀಗಲ್‌ ಸ್ಟಡೀಸ್‌ ಆಂಡ್‌ ರಿಸರ್ಚ್‌ ವಿಶ್ವವಿದ್ಯಾಲಯದ 2026ನೇ ಸಾಲಿನ ಕಾನೂನು ಪದವೀಧರರ ವಕೀಲ ವೃತ್ತಿಯ ನೋಂದಣಿಯನ್ನು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ತಡೆ ಹಿಡಿದು ಆದೇಶ ಹೊರಡಿಸಿತ್ತು.

ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್‌ ಅವರನ್ನು ಆಹ್ವಾನಿಸಿದ ಕ್ರಮವನ್ನು ಶಿಕ್ಷಣ ಸಂಸ್ಥೆಯ 400 ವಿದ್ಯಾರ್ಥಿಗಳು ವಿರೋಧಿಸಿದ್ದರು. ಆಹ್ವಾನದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಉಪಕುಲಪತಿಗಳಿಗೆ ಮನವಿ ಮಾಡಿದ್ದರು. ನಂತರ ಸಿಜೆಐ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿದ ಕುರಿತು ವರದಿ ಕೊಡುವಂತೆ ಉಪಕುಲಪತಿಗೆ ಬಾರ್‌ ಕೌನ್ಸಿಲ್‌ ಮನವಿ ಮಾಡಿತ್ತು. ಅಲ್ಲದೇ ಕಾನೂನು ವಿದ್ಯಾರ್ಥಿಗಳು ಶಿಸ್ತು ಉಲ್ಲಂಘಿಸಿರುವುದು ವರದಿಯಲ್ಲಿ ಕಂಡು ಬಾರದಿದ್ದಲ್ಲಿ ನೋಂದಣಿ ಪ್ರಕ್ರಿಯೆಗೆ ಅವಕಾಶ ನೀಡುವುದಾಗಿ ಬಿಸಿಐ ಸ್ಪಷ್ಟಪಡಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani