Dailyhunt Logo
  • Light mode
    Follow system
    Dark mode
    • Play Story
    • App Story
ಆಕ್ರೋಶ,ಬೈಗುಳ,ಕಣ್ಣೀರ ನಡುವೆ 'ಫುಟ್‌ಪಾತ್‌ ಕ್ಲೀನ್': 2ನೇ ದಿನ 39 ಕಿ.ಮೀ.ಒತ್ತುವರಿ ತೆರವು

ಆಕ್ರೋಶ,ಬೈಗುಳ,ಕಣ್ಣೀರ ನಡುವೆ 'ಫುಟ್‌ಪಾತ್‌ ಕ್ಲೀನ್': 2ನೇ ದಿನ 39 ಕಿ.ಮೀ.ಒತ್ತುವರಿ ತೆರವು

ಬೆಂಗಳೂರು: ಬೀದಿಬದಿ ವ್ಯಾಪಾರಿಗಳ ಪರ-ವಿರೋಧ, ಬೈಗುಳ, ಆಕ್ರೋಶ-ಕಣ್ಣೀರು, ತೊಳಲಾಟ ನಡುವೆಯೂ ಗ್ರೇಟರ್‌ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ದಿನವಾದ ಬುಧವಾರ 63.6 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪುಟ್‌ಪಾತ್‌ ಒತ್ತುವರಿ ತೆರವುಗೊಳಿಸಿದ್ದ ಜಿಬಿಎ, 2ನೇ ದಿವಾದ ಗುರುವಾರವೂ 39 ಕಿ.ಮೀ.

ವ್ಯಾಪ್ತಿಯಲ್ಲಿ ಪೊಲೀಸ್‌ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಿತು. ತಳ್ಳುಗಾಡಿ, ಪೆಟ್ಟಿ ಅಂಗಡಿಗಳು, ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಯಿತು.

ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 7 ಕಿ.ಮೀ., ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 12.70, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 11, ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 8.55 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಯಿತು. ಪಾಲಿಕೆಗಳ ವ್ಯಾಪ್ತಿಯಲ್ಲಿ ಬೆಳ್ಳಂಬೆಳ ಗ್ಗೆ ಜೆಸಿಬಿ ಗರ್ಜನೆ ಮಾಡಿದವು. ಟಿಪ್ಪರ್‌, ಟ್ರ್ಯಾಕ್ಟರ್‌ಮೂಲಕ ವಿಭಾಗವಾರು ಕಾರ್ಯಾಚರಣೆ ನಡೆಯಿತು.

ಕೇಂದ್ರ ಪಾಲಿಕೆ ವ್ಯಾಪ್ತಿಯ ಕೆ.ಆರ್‌.ಮಾರುಕಟ್ಟೆ ಸುತ್ತಮುತ್ತ ನಡೆದ ಕಾರ್ಯಾಚರಣೆಗೆ ಕೆಲವು ಬೀದಿಬದಿ ವ್ಯಾಪಾರಿಗಳು ಅಡ್ಡಿ ಉಂಟುಮಾಡಿದರು. ಹಲವು ವರ್ಷದಿಂದ ಬೀದಿಬದಿ ವ್ಯಾಪಾರ ನಂಬಿಕೊಂಡು ಬದುಕು ಕಳೆಯುತ್ತಿದ್ದೇವೆ. ಈಗ ಪಾಲಿಕೆ ನಮ¬¾ನ್ನ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕೆ.ಆರ್‌.ಮಾರುಕಟ್ಟೆ ವ್ಯಾಪಾರಿ ಸೆಲ್ವಿ ಕಣ್ಣೀರಿಟ್ಟು ಹಿಡಿಶಾಪ ಹಾಕಿದರು. ಆದರೆ, ಇದಕ್ಕೆ ಕಿವಿಗೊಡದ ಅಧಿಕಾರಿಗಳು ಕಾರ್ಮಿಕರ ನೆರವಿನಿಂದ ತೆರವುಗೊಳಿಸಿದರು.

ಮೆಜೆಸ್ಟಿಕ್‌ ನಲ್ಲಿ ಹೈಡ್ರಾಮ
ಮೆಜೆಸ್ಟಿಕ್‌ನಲ್ಲಿ ಕೂಡ ಫುಟ್ಪಾತ್‌ ಒತ್ತುವರಿ ತೆರವಿನ ವೇಳೆ ಹೈಡ್ರಾಮ ನಡೆಯಿತು. ಫುಟ್ಪಾತ್‌ ಮೇಲೆ ಇರಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲು ಅಧಿಕಾರಿಗಳು, ಸಿಬ್ಬಂದಿ ಮುಂದಾ ದಾಗ ಅಡ್ಡಿಉಂಟು ಮಾಡಿ ಆಕ್ರೋಶ ಹೊರಹಾಕಿ ದರು. ಪೊಲೀಸರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಹಬದಿಗೆ ಬಂತು. ಬಳಿಕ ತೆರವು ಕಾರ್ಯ ನಡೆಯಿತು.

ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್‌ನಲ್ಲಿ ಮತ್ತೆ ಕೆಲವು ಅಂಗಡಿಗಳು ತಲೆಎತ್ತಿದ್ದು ಕಂಡುಬಂತು. ಕಾರ್ಪೊರೇಷನ್‌ ಸರ್ಕಲ್‌ನಲ್ಲಿ ಫುಟ್ಪಾತ್‌ ಮೇಲೆ ಇದ್ದ ಅಂಗಡಿಗಳನ್ನು ನೆಲಸಮ ಮಾಡಲಾಯಿತು. ಮಿಷನ್‌ ರಸ್ತೆಯಲ್ಲಿ, ಮೈಸೂರು ಬ್ಯಾಂಕ್‌ ವೃತ್ತ ಪಾದಾಚಾರಿ ರಸ್ತೆ ತೆರವು ಕಾರ್ಯ ನಡೆಯಿತು. 11 ರಸ್ತೆಗಳ 8.55 ಕಿ.ಮೀ. ರಸ್ತೆಯ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯ ನಡೆಯಿತು. ಸುಮಾರು 80 ಕಾರ್ಮಿಕರನ್ನು 6 ಜೆ.ಸಿ.ಬಿಗಳನ್ನು 20 ಟ್ರ್ಯಾಕ್ಟರ್‌, 5 ಟಿಪ್ಪರ್‌ಗಳನ್ನು ಬಳಕೆ ಮಾಡಲಾಯಿತು ಎಂದು ಕೇಂದ್ರ ನಗರ ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಹೆಚ್ಚು ವಾಹನ ದಟ್ಟಣೆ ಇರುವಂತಹ ರಸ್ತೆಗಳಿಂದ ಬೀದಿಬದಿ ವ್ಯಾಪಾರಿಗಳು ಶಿಫ್ಟ್
ಜಿಬಿಎ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಿಲ್ಲ, ಆದರೆ ಹೆಚ್ಚಿನ ವಾಹನ ದಟ್ಟಣೆ ನಿರ್ವಹಿಸುವ ರಸ್ತೆಗಳಿಂದ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಿಂದ ವಾರ್ಡ್‌ ರಸ್ತೆಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಆರಂಭವಾಗಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ಹಿರಿಯ ಅಧಿಕಾರಿ ಗಳ ಜೊತೆ ವರ್ಚುವಲ್‌ ಸಭೆ ನಡೆಸಿ ಮಾತನಾ ಡಿದ ಸಚಿವರು, ಬೀದಿ ಬದಿ ವ್ಯಾಪಾರಿಗಳನ್ನಷ್ಟೇ ಅಲ್ಲ, ಅಡೆತಡೆಗಳು, ಅನಾಥ ವಾಹನಗಳು ಹಾಗೂ ಅಕ್ರಮ ಪಾರ್ಕಿಂಗ್‌ ವಾಹನಗಳನ್ನೂ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಒತ್ತುವರಿ ತೆರವುಗೊಂಡ ಪ್ರದೇಶಗಳಲ್ಲಿ ತಕ್ಷಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸಚಿವರ ವಿಡಿಯೋ ಸಂದೇಶ: ಪಾದಾಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ವಿಡಿಯೋ ಸಂದೇಶವನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡರು. ಬೆಂಗಳೂರು ಇನ್ನಷ್ಟು ಸುಂದರ, ಸುರಕ್ಷಿತ ಮತ್ತು ವ್ಯವಸ್ಥಿತ ನಗರವಾಗಬೇಕೆಂಬ ಉದ್ದೇಶದಿಂದ ಕೈಗೊಂಡಿರುವ ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಿ, ಸಹಕರಿಸಬೇಕು. ನೀವು ಮತ್ತು ನಾವು ಒಟ್ಟಾಗಿ ಪ್ರಯತ್ನಿಸಿದಾಗ ಮಾತ್ರ ಬೆಂಗಳೂರಿನಲ್ಲಿ ಶಾಶ್ವತ ಸುಧಾರಣೆ ಸಾಧ್ಯ ಎಂದಿದ್ದಾರೆ.

ಸಚಿವರಿಂದ ರಾತ್ರಿ ನಗರ ಪ್ರದಕ್ಷಿಣೆ
ಈಗಾಗಲೇ ಪ್ರಗತಿ ಪರಿಶೀಲನೆ ನಡೆಸಿ ಜಿಬಿಎ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಗ್ರೇಟರ್‌ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ರಾತ್ರಿ ನಗರ ಪರಿವೀಕ್ಷಣೆ ನಡಸಿದರು. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಹೊರ ವರ್ತುಲ ರಸ್ತೆ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೂ ಮತ್ತು ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಲೌರಿ ಜಂಕ್ಷನ್‌ವರೆಗೂ ಎರಡೂ ಕಡೆಯ ಪಥದ ಸ್ಥಳ ಪರಿವೀಕ್ಷಣೆ ನಡೆಸಿದರು.

ಈ ವೇಳೆ ಸ್ಥಳೀಯರು ಸಚಿವ ಕೃಷ್ಣ ಬೈರೇಗೌಡ ಅವರಲ್ಲಿ ಕೆಲವು ಸಮಸ್ಯೆ ಹೇಳಿಕೊಂಡರು. ಈ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಜೊತೆ ವಾಹನದಲ್ಲಿ ತೆರಳಿ ಪಾದಾಚಾರಿ ತೆರವು ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಪಾದಚಾರಿ ರಸ್ತೆ ನಿರ್ಮಾಣ, ಒತ್ತುವರಿ ತೆರವು ಸೇರಿದಂತೆ ಹಲವು ವಿಚಾರಗಳನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ತರಾಟೆ
ಜನ ಸಾಯ್ತಾ ಇರೋದು ನಿಮಗೆ ಕಾಣ್ತಾ ಇಲ್ವ? ನಿಮ್ಮಕೆಲಸ ನೀವು ಮಾಡೋಕೆ ನಾವು ಬಂದು ಬೇಡ್ಕೋಬೇಕ? ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಬಳಿಕ ಮಾತನಾಡಿದ ಸಚಿವರು, ಹೊರ ವಲಯ ರಸ್ತೆಯ ಮರು ಅಭಿವೃದ್ಧಿ ಯೋಜನೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ಸ್ಥಳೀಯರೊಂದಿಗೆ ಸಮಾಲೋಚನೆ ಸಭೆ ನಡೆಸಲಾಗುವುದು ಹೇಳಿದರು. ಸಚಿವರಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ಪಾಲಿಕೆ ಆಯುಕ್ತರುಗಳು, ಬಿ-ಸ್ಮೈಲ್‌ ಎಂಜಿನಿಯರ್ ಗಳು , ಸ್ಥಳೀಯ ಅಧಿಕಾರಿಗಳು ಸಾಥ್‌ ನೀಡಿದರು.

ಜು.10ರಿಂದ ಅನಾಥ ವಾಹನ ತೆರವಿಗೆ ತಾಕೀತು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜುಲೈ 10ರಿಂದ ಪೊಲೀಸರ ಮತ್ತು ಪಾಲಿಕೆ ಅಧಿಕಾರಿಗಳ, ಸಿಬ್ಬಂದಿಗಳ ಸಮನ್ವಯದೊಂದಿಗೆ ಅನಾಥ ವಾಹನಗಳ ತೆರವು ಅಭಿಯಾನ ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಅನಾಥ ವಾಹನಗಳ ತೆರವು ಕಾರ್ಯಾಚರಣೆ ಸಂಬಂಧ ಗುರುವಾರ ಹಿರಿಯ ಅಧಿಕಾರಿಗಳ ವರ್ಚುವಲ್‌ ಸಭೆ ನಡೆಸಿದರು. ರಾಜಧಾನಿಯ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಗರ ಪಾಲಿಕೆ ಹಾಗೂ ಸಂಚಾರ ಪೊಲೀಸರ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜಧಾನಿ ವ್ಯಾಪ್ತಿಯಲ್ಲಿ ಬೃಹತ್‌ ಕಟ್ಟಡ ತ್ಯಾಜ್ಯ ಹಾಗೂ ಗಿಡಗಳ ತೆರವು ಅಭಿಯಾನವನ್ನು ಜು.15ರ ನಂತರ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಅಭಿಯಾನವನ್ನು ನಗರ ಪಾಲಿಕೆ, ಮೆಟ್ರೋ ಹಾಗೂ ರೈಲ್ವೆ ಇಲಾಖೆಗಳ ಸಹಯೋಗದಲ್ಲಿ ಜಂಟಿಯಾಗಿ ನಡೆಸಿ ನಗರವನ್ನು ಮತ್ತಷ್ಟು ಸ್ವತ್ಛ ಹಾಗೂ ಸುಂದರಗೊಳಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಪಾದಚಾರಿ ಮಾರ್ಗಗಳ ಮೇಲಿನ ರ್‍ಯಾಂಪ್‌ಗಳ ತೆರವು
ನಗರದಲ್ಲಿ ಮತ್ತೂಂದು ಪ್ರಮುಖ ಸಮಸ್ಯೆಯೆಂದರೆ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮುಂಭಾಗದಲ್ಲಿ ವಾಹನಗಳ ಪ್ರವೇಶಕ್ಕಾಗಿ ಪಾದಚಾರಿ ಮಾರ್ಗಗಳ ಮೇಲೆ ರ್‍ಯಾಂಪ್‌ ಗಳನ್ನು ನಿರ್ಮಿಸಲಾಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಇಂತಹ ರ್‍ಯಾಂಪ್‌ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಗ್ರೇಟರ್‌ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌, ಪಾಲಿಕೆಗಳ ಆಯುಕ್ತರು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani