Dailyhunt
ಆನೆ-ಮಾನವ ಸಂಘರ್ಷಕ್ಕೆ ತಡೆ: ಸಚಿವ ಈಶ್ವರ ಖಂಡ್ರೆ

ಆನೆ-ಮಾನವ ಸಂಘರ್ಷಕ್ಕೆ ತಡೆ: ಸಚಿವ ಈಶ್ವರ ಖಂಡ್ರೆ

ಡಿಕೇರಿ: ವನ್ಯಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರ ಅಮೂಲ್ಯ ಜೀವ, ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶಗಳಲ್ಲಿ ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.

ಖಂಡ್ರೆ ಹೇಳಿದ್ದಾರೆ.

ನೂತನ ತೂಗುಸೇತುವೆ ಮತ್ತು ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ಅವರು ವರದಿ ನೀಡಿದ್ದಾರೆ. ಕಾಡಂಚಿನ ಜನರು ಕೂಡ ಈ ಬಗ್ಗೆ ಸಲಹೆ ನೀಡಬೇಕು. ರೈಲ್ವೇ ಬ್ಯಾರಿಕೇಡ್‌, ಆನೆ ಕಂದಕ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಇಲ್ಲ. ಆದಷ್ಟು ಶೀಘ್ರ ಹೆಚ್ಚಿನ ಕಡೆ ಬ್ಯಾರಿಕೇಡ್‌ ಅಳವಡಿಸಲಾಗುವುದು ಎಂದು ತಿಳಿಸಿದರು.

ಅರಣ್ಯವಾಸಿಗಳು ಮತ್ತು ಅರಣ್ಯದಂಚಿನ ಜನರು ದೀರ್ಘ‌ ಕಾಲದಿಂದ ಅರಣ್ಯವನ್ನು ಸಂರಕ್ಷಿಸಿದ್ದಾರೆ. ಆದರೆ ಇಂದು ಮಾನವ-ವನ್ಯಜೀವಿ ಸಂಘರ್ಷದಿಂದ ಅಮೂಲ್ಯ ಜೀವಹಾನಿ ಆಗುತ್ತಿದ್ದು, ಅಧಿಕಾರಿ ಮತ್ತು ಸಿಬಂದಿ ಜನರ ಜೀವ ಉಳಿಸಲು ಪ್ರಥಮ ಆದ್ಯತೆ ನೀಡಬೇಕು ಎಂದರು.

ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ದುಬಾರೆ ಹಾಡಿಯಲ್ಲಿರುವ 150 ಮನೆಗಳ ನಿವಾಸಿಗಳಿಗೆ ತುರ್ತು ಸಂದರ್ಭದಲ್ಲಿ ನಗರಕ್ಕೆ ಬರಲು ಅನುಕೂಲವಾಗುವಂತೆ 7.3 ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ತೂಗು ಸೇತುವೆ ನಿರ್ಮಿಸಲಾಗುತ್ತಿದೆ. ಈ ಮೂಲಕ ದೀರ್ಘ‌ ಕಾಲದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದರು.

ಆನೆಗಳ ಮೇಲೆ ನಿಗಾ
ಅರಣ್ಯ ಇಲಾಖೆ ಆನೆಗಳ ಚಲನವಲನದ ಬಗ್ಗೆ ನಿಗಾ ಇಡಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ. ನವೆಂಬರ್‌, ಡಿಸೆಂಬರ್‌, ಜನವರಿಯಲ್ಲಿ ಆನೆಗಳು ಆಹಾರ ಅರಸಿಕೊಂಡು ಕಾಡಿನಿಂದ ಹೊರಬರುತ್ತವೆ. ಆಗ ಸಂಘರ್ಷ ಹೆಚ್ಚಾಗುತ್ತದೆ. ಕಾಡಿನಂಚಿನ ಜನರೊಂದಿಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬಂದಿ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಪಾಲಿಸಿ, ಜನರಿಗೆ ಅರಿವು ಮೂಡಿಸಬೇಕು ಎಂದರು.

ಶಾಸಕ ಡಾ| ಮಂತರ್‌ ಗೌಡ ಮಾತನಾಡಿ, ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ತೋಟಕ್ಕೆ ಬಂದು ಮೊಕ್ಕಾಂ ಹೂಡಿರುವ ಆನೆಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು, ಬೆಳೆ ಹಾನಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್‌ಪುಷ್ಕರ್‌, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani