Dailyhunt Logo
  • Light mode
    Follow system
    Dark mode
    • Play Story
    • App Story
ಆರ್‌ಎಸ್‌ಎಸ್‌ ಅವಹೇಳನ ಪ್ರಕರಣ: ಪ್ರಿಯಾಂಕ್‌, ನಲಪಾಡ್‌ಗೆ ಜಾಮೀನು

ಆರ್‌ಎಸ್‌ಎಸ್‌ ಅವಹೇಳನ ಪ್ರಕರಣ: ಪ್ರಿಯಾಂಕ್‌, ನಲಪಾಡ್‌ಗೆ ಜಾಮೀನು

ಬೆಂಗಳೂರು: ಆರ್‌ಎಸ್‌ಎಸ್‌ ಬಗ್ಗೆ ಅವಹೇಳನ ಹಾಗೂ ಮಾನಹಾನಿ ಆರೋಪದ ಪ್ರಕರಣ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್‌ ಶನಿವಾರ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದು ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಎ.ತೇಜಸ್ ದಾಖಲಿಸಿದ್ದ ಖಾಸಗಿ ದೂರು ಕುರಿತು ನ್ಯಾಯಾಲಯ ಈ ಹಿಂದೆ ವಿಚಾರಣೆ ನಡೆಸಿ, ಇಬ್ಬರು ಖುದ್ದು ಹಾಜರಾಗಬೇಕು ಎಂದು ಸಮನ್ಸ್‌ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳು ಜಾಮೀನು ನೀಡಬಹುದಾದ ಸ್ವರೂಪದಲ್ಲಿದ್ದು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್‌ ಹಾಗೂ 10 ಸಾವಿರ ರೂ. ನಗದು ಭದ್ರತೆ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ.

ಏನಿದು ಪ್ರಕರಣ?:

ಆರ್‌ಎಸ್‌ಎಸ್‌ ಕಾರ್ಯಕರ್ತ ಎ.ತೇಜಸ್ ಎಂಬುವವರು 2025ರ ನ.5ರಂದು ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಅವರು 2025ರ ಅ.4ರಂದು ಮುಖ್ಯಮಂತ್ರಿಗೆ ಒಂದು ಪತ್ರ ಬರೆದಿದ್ದು, ಆ ಪತ್ರದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು. ಸರ್ಕಾರಿ ಶಾಲೆ, ಕಾಲೇಜುಗಳ ಮೈದಾನಗಳಲ್ಲಿ ಆರ್‌ಎಸ್‌ಎಸ್‌ ಸಂಘವು ಬೈಠಕ್ ಮತ್ತು ಇತರೆ ಚಟುವಟಿಕೆಗಳನ್ನು ಮಾಡದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಸಂಘದವರು ಸಮಾಜದಲ್ಲಿ ಭಯದ ವಾತಾವರಣ ಉಂಟು ಮಾಡುತ್ತಾರೆ. ಹೀಗಾಗಿ ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವಂತೆ ಪತ್ರದಲ್ಲಿ ಕೋರಿದ್ದಾರೆ. ಈ ಪತ್ರವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ಬಳಿಕ ಆರ್‌ಎಸ್‌ಎಸ್‌ ಸಂಘದ ಬಗ್ಗೆ 'ಎಕ್ಸ್' ಖಾತೆಯಲ್ಲಿ ಮಾನಹಾನಿಕಾರಿ ಪೋಸ್ಟ್ ಮಾಡಿದ್ದಾರೆ ಎಂದು ದೂರಿದ್ದರು.

ಈ ಪೋಸ್ಟ್‌ಗಳನ್ನು ಅನುಸರಿಸಿ ಸಚಿವ ದಿನೇಶ್‌ ಗುಂಡೂರಾವ್‌ ಆರ್‌ಎಸ್‌ಎಸ್‌ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕಾರಿ ಪೋಸ್ಟ್‌ ಮಾಡಿದ್ದಾರೆ. ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ನಲಪಾಡ್‌ ಕೂಡ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡುವಾಗ ಆರ್‌ಎಸ್‌ಎಸ್‌ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಬಳಿಕ ನ್ಯಾಯಾಲಯವು ಪ್ರಕರಣದ 2ನೇ ಆರೋಪಿ ದಿನೇಶ್‌ ಗುಂಡೂರಾವ್‌ ವಿರುದ್ಧದ ಆರೋಪ ಕೈಬಿಟ್ಟಿತ್ತು. ಉಳಿದಿಬ್ಬರ ವಿರುದ್ಧ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani