ಬೆಂಗಳೂರು: 'ಹರ್ ಘರ್ ತಿರಂಗಾ' ಅಭಿಯಾನವನ್ನು ದೇಶಾದ್ಯಂತ ನಡೆಸಲು ಮುಂದಾಗಿರುವ ಬಿಜೆಪಿಯು ಮೊದಲು ತನ್ನ ವೈಚಾರಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ದೇಶದ ಜನತೆಗೆ ವಿವರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾತಂತ್ರ್ಯ ನಂತರ 5 ದಶಕಗಳಿಗೂ ಹೆಚ್ಚು ಕಾಲ ಆರ್‌ಎಸ್‌ಎಸ್‌ನ ನಾಗಪುರದ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ. 1947ರ ಆಗಸ್ಟ್ 15 ಹಾಗೂ 1950ರ ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ನಂತರ 52 ವರ್ಷಗಳ ಅಂತರದ ಬಳಿಕ 2002ರ ಜನವರಿ 26ರಂದು ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಮತ್ತೆ ಹಾರಿಸಲಾಯಿತು ಎಂಬುದನ್ನು ಐತಿಹಾಸಿಕ ವರದಿಗಳು ದಾಖಲಿಸಿವೆ. ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು. ತನ್ನ ವೈಚಾರಿಕ ಮಾತೃಸಂಸ್ಥೆ ತ್ರಿವರ್ಣ ಧ್ವಜದ ಬದಲಿಗೆ ಭಗವಾಧ್ವಜಕ್ಕೆ ಏಕೆ ಆದ್ಯತೆ ನೀಡಿತು? ಎಂದು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯಾನಂತರ ಇಷ್ಟು ದೀರ್ಘಕಾಲ ತನ್ನದೇ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಏಕೆ ಕಾಣಿಸಲಿಲ್ಲ? ಮೊದಲು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿಂದಲೇ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿ ಎಂದಿದ್ದಾರೆ.

