ಕೋಲ್ಕತಾ: ಆರ್‌ಜಿ ಕರ್ ವೈದ್ಯೆಯ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿ ದಿಕ್ಕುತಪ್ಪಿಸಿದ ಆರೋಪದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ.
ಆಗಿನ ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಆಗಿನ ಉಪ ಪೊಲೀಸ್ ಆಯುಕ್ತ (ಉತ್ತರ) ಅಭಿಷೇಕ್ ಗುಪ್ತಾ ಮತ್ತು ಉಪ ಪೊಲೀಸ್ ಆಯುಕ್ತ (ಕೇಂದ್ರ) ಇಂದಿರಾ ಮುಖರ್ಜಿ ಅವರನ್ನು ಅಮಾನತುಗೊಳಿಸಲಾಗಿದೆ.
ನಬನ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಅಧಿಕಾರಿ ಈ ಮಾಹಿತಿ ನೀಡಿದ್ದು ಮೂವರು ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಲಂಚ ನೀಡಲು ಮುಂದಾದದ್ದು ಮತ್ತು ಲಿಖಿತ ಆದೇಶವಿಲ್ಲದೆ ಪತ್ರಿಕಾಗೋಷ್ಠಿ ನಡೆಸುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮಗಳನ್ನು ಪ್ರಾರಂಭಿಸಲಾಗುವುದು.
2024 ಆಗಸ್ಟ್ 9 ರಂದು ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆ ಸೆಮಿನಾರ್ ಹಾಲ್‌ನೊಳಗಿನ ಆಸ್ಪತ್ರೆ ಕಟ್ಟಡದಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ 33 ವರ್ಷದ ಸಂಜಯ್ ರಾಯ್ ಎಂಬಾತನನ್ನು ಪೊಲೀಸರು ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಈ ಘಟನೆಯು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು, ಸಂತ್ರಸ್ತೆಗೆ ನ್ಯಾಯಕ್ಕಾಗಿ ಬೇಡಿಕೆಗಳು ವ್ಯಕ್ತವಾಗಿದ್ದವು.ಸಂತ್ರಸ್ತೆಯ ತಾಯಿ ಬಂಗಾಳ ಚುನಾವಣೆಯಲ್ಲಿ ಪಾನಿಹಟಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ಆರ್‌ಜಿ ಕರ್ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು.

