ಉಡುಪಿ: ಪ್ರಸ್ತುತ ಮಳೆಗಾಲವಾದರೂ ವರುಣನ ಅಬ್ಬರ ಕಡಿಮೆಯಿದೆ. ಹೀಗಾಗಿ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ, ಐಎಲ್‌ಐ, ಸಾರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿಂದ ನವೆಂಬರ್ ವರೆಗೆ ಆರೋಗ್ಯ ಇಲಾಖೆಯು ಡ್ರೈ ಡೇ ಹಮ್ಮಿಕೊಂಡಿದ್ದು, ಸೊಳ್ಳೆ ನಿಯಂತ್ರಣಕ್ಕೆ ಕೈ ಜೋಡಿಸದವರಿಗೆ ದಂಡ ಬೀಳಲಿದೆ.
ಜಿಲ್ಲೆಯಾದ್ಯಂತ ಡೆಂಗ್ಯೂ, ಮಲೇರಿಯಾ, ಪೈಲೇರಿಯಾ, ಐಎಲ್‌ಐ ಹಾಗೂ ಸಾರಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ 888 ಆಶಾ ಕಾರ್ಯಕರ್ತರು, 40 ಆರ್‌ಬಿಎಸ್‌ಕೆ ಸಿಬಂದಿ, 143 ಪಿಎಚ್‌ಸಿಒ ಸಿಬಂದಿ, 23 ಲಿಂಕ್ ವರ್ಕರ್ಸ್ ಹಾಗೂ 30 ಸ್ವಯಂ ಸೇವಕರನ್ನು ಸೇವೆಗೆ ನಿಯೋಜಿಸಿದೆ. ಅವರು ಮನೆ-ಮನೆಗೆ, ಶಾಲೆ-ಕಾಲೇಜುಗಳು ಹಾಗೂ ಕಟ್ಟಡ- ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀರು ನಿಲ್ಲಿಸದಂತೆ ಸೂಚನೆ ನೀಡುವುದಲ್ಲದೇ ಜನರ ಆರೋಗ್ಯ ಪರೀಕ್ಷೆ ನಡೆಸಿ ಸೂಕ್ತ ಮಾಹಿತಿ ನೀಡುತ್ತಾರೆ.
ಈಗಾಗಲೇ ಆರೋಗ್ಯ ಇಲಾಖೆಯಿಂದ ಗುತ್ತಿಗೆದಾರರು, ಮಾಲಕರ ಸಭೆ ನಡೆಸಿ ಕಾರ್ಮಿಕರ ಮಾಹಿತಿ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ಕಾರ್ಮಿಕರಿಂದ ಕಾರ್ಮಿಕರು ಹಾಗೂ ಇತರರಿಗೆ ಹರಡದಂತೆ ಈ ಕ್ರಮ. ಜತೆಗೆ ಯಾವುದೇ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರ ಕಾಣಿಸಿದಲ್ಲಿ ಎರಡು ಬಾರಿ ಎಚ್ಚರಿಕೆಯ ಜತೆ ಮೂರನೇ ಬಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಅಂಗನವಾಡಿ, ಶಾಲೆ- ಕಾಲೇಜುಗಳಿಗೆ ಆರ್‌ಬಿಎಸ್‌ಕೆ
ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ಆರ್‌ಬಿಎಸ್‌ಕೆ ತಂಡ ಪ್ರತೀ ಶನಿವಾರ ಭೇಟಿ ನೀಡಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ನಡೆಸುತ್ತದೆ. ಉಡುಪಿಯಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 2 ಆರ್‌ಬಿಎಸ್‌ಕೆ ತಂಡ ಈ ಭೇಟಿ ಹಾಗೂ ಜಾಗೃತಿ ಪ್ರಕ್ರಿಯೆ ನಡೆಸುತ್ತದೆ. ಅಲ್ಲದೇ ರೋಗ ಹರಡದಂತೆ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಅವರು ಮಕ್ಕಳು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಬಳಿಕ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಿಕ್ಷಕರು, ಉಪನ್ಯಾಸಕರು ಡ್ರೈ ಡೇ ನಡೆಸಲು ಸೂಚನೆ ನೀಡುತ್ತಾರೆ. ಮೊದಲ ಭೇಟಿಯಲ್ಲಿ ಸುತ್ತಲಿನ ಸ್ಥಿತಿಗತಿ ಪರೀಕ್ಷಿಸುವ ಅವರು, ಮತ್ತೆ ವಾರದ ನಡುವೆ ಯಾವುದೇ ದಿನ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ. ಇನ್ನು ಉಡುಪಿ ಹೊರತುಪಡಿಸಿ ಜಿಲ್ಲೆಯ ಇತರೆಡೆ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪ್ರತೀ ಶುಕ್ರವಾರ ಪರೀಕ್ಷೆ ನಡೆಯುತ್ತದೆ.
30 ಸ್ವಯಂ ಸೇವಕರು
ನಗರಸಭೆಯಿಂದ 15 ಹಾಗೂ ಎನ್‌ಎಚ್‌ಎಂನಿಂದ 8 ಲಿಂಕ್ ವರ್ಕರ್ಸ್ ಗಳನ್ನು ನಿಯೋಜನೆ ಮಾಡಲಾಗಿದ್ದು, ಜತೆಗೆ 30 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ವಯಂ ಸೇವಕರನ್ನು ಪ್ರತೀ ನಾಲ್ವರ ಒಂದು ತಂಡ ವನ್ನಾಗಿ ರೂಪಿಸಿ ಅವರಿಗೆ ಬೆರಳಿನಿಂದ ರಕ್ತ ತೆಗೆಯುವುದು, ಡೆಂಗ್ಯೂ ಅಥವಾ ಮಲೇರಿಯಾ ಎಂಬ ಪರಿಶೀಲನೆ ನಡೆಸುವುದು ಮುಂತಾದ ತರಬೇತಿ ನೀಡಲಾಗಿದೆ.
ಈ ಸ್ವಯಂ ಸೇವಕರ ತಂಡ ಜಿಲ್ಲೆಯ 94 ಕಾಮಗಾರಿ ನಿರ್ಮಾಣ ಸ್ಥಳಕ್ಕೆ 4 ಜನರ ಒಂದು ತಂಡದಂತೆ ಭೇಟಿ ನೀಡಿ ಅಲ್ಲಿ ಮಳೆ ನೀರು ನಿಲ್ಲುತ್ತದೆಯೇ ಇಲ್ಲವೇ ಪರಿಶೀಲಿಸಲಿದೆ. ಎಲ್ಲಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ಅಲ್ಲಿ ಟೆಮಿಫಾಸ್ ಸೊಲ್ಯೂಶನ್ ಹಾಕುವ ಪ್ರಕ್ರಿಯೆ ಅಥವಾ ಫಾಗಿಂಗ್ ನಡೆಸುವ ಕೆಲಸ ನಡೆಸಲಾಗುತ್ತದೆ. ಇನ್ನು ಜಿಲ್ಲೆಯಾದ್ಯಂತ 888 ಆಶಾ ಕಾರ್ಯಕರ್ತೆಯರು ಕೂಡೆ ಮನೆ ಮನೆ ಭೇಟಿ ನೀಡಿ ಮಾಹಿತಿ ಪಡೆದು, ಜಾಗೃತಿ ಮೂಡಿಸುತ್ತಿದ್ದಾರೆ. ಜನರಿಂದ ನಿರ್ಲಕ್ಷ್ಯ ಮುಂದುವರಿದಲ್ಲಿ ಸಂಬಂಧಪಟ್ಟ ಮನೆ ಮಾಲಕರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುತ್ತದೆ.
ದಂಡ ವಿಧಿಸಲು ನಿರ್ಧಾರ
ಜನರು ಆರೋಗ್ಯ ಹಾಗೂ ಸುರಕ್ಷೆಗೆ ಆದ್ಯತೆ ನೀಡಲೇಬೇಕು. ಅಂಗನವಾಡಿ, ಶಿಕ್ಷಣ ಸಂಸ್ಥೆಗಳು, ಕಟ್ಟಡ ನಿರ್ಮಾಣ ಪ್ರದೇಶ ಹಾಗೂ ಮನೆಗಳ ವ್ಯಾಪ್ತಿಯಲ್ಲಿ ಜನರು ನೀರು ನಿಲ್ಲಿಸಿದಂತೆ ಜಾಗೃತಿ ಮೂಡಿಸಿದರೂ ಎರಡು ಬಾರಿ ಎಚ್ಚರಿಕೆ ನೀಡಿದ ಬಳಿಕ ಮೂರನೇ ಬಾರಿಗೆ ದಂಡ ವಿಧಿಸಲು ಜಿಲ್ಲಾ ಆರೋಗ್ಯ ಸಂಘ ನಿರ್ಧರಿಸಿದೆ. ಸಂಗ್ರಹಗೊಂಡ ಈ ದಂಡವನ್ನು ಆರೋಗ್ಯ ಇಲಾಖೆ ಸಂಬಂಧ ಪಟ್ಟ ಸಂಸ್ಥೆಗಳಿಗೆ ಶೇ. 60ರಷ್ಟು ಹಾಗೂ ಪ್ರಚಾರಕ್ಕೆ ಸಾಮಗ್ರಿಗಳಿಗೆ ಶೇ. 40ರಷ್ಟು ವಿನಿಯೋಗಿಸಲಾಗುತ್ತದೆ. -ಡಾ| ಬಸವರಾಜ ಹುಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ
- ಭರತ್‌ರಾಜ್ ಕಲ್ಲಡ್ಕ

