ಬೊಂಬಾಯಿನಲ್ಲಿ ಈಗ ಮಳೆಗಾಲವಲ್ಲ; ನಾಲ್ಕು ದಿನಗಳಿಂದ ಮಳೆಯದ್ದೇ ಕಾಲ ! ಎಡೆಬಿಡದೇ ಮಿಲಿ ಮೀಟರ್ ಹೋಗಿ ಸೆಂಟಿ ಮೀಟರ್‌ಗಟ್ಟಲೆ ಮಳೆ ಸುರಿಯುತ್ತಿದೆ. ರಸ್ತೆ, ರೈಲ್ವೆ ಹಳಿಗಳ ಮೇಲೆಲ್ಲ ನೀರು. ಲೋಕಲ್ ಟ್ರೆ„ನ್ ಗಳೂ ಸ್ತಬ್ಧಗೊಂಡಿವೆ. ಬಸ್, ರಿಕ್ಷಾಗಳಿಗೂ ಹಾರಲು ಬರುವುದಿಲ್ಲ.
ಅದಕ್ಕೇ ಅವೂ ಸಹ ಮಳೆ -ಗಾಳಿಯ ಅಬ್ಬರಕ್ಕೆ ಮೈ ಮುದುಡಿಕೊಂಡು ಕುಳಿತಿವೆ.
ಎಲ್ಲೆಲ್ಲಿಗೆ ಯಾರ್ಯಾರು ಹೋಗಿದ್ದರೋ, ಎಲ್ಲೆಲ್ಲಿದ್ದರೋ ಅವರು ಅಲ್ಲೇ ಧ್ಯಾನಸ್ಥರಾಗಿದ್ದಾರೆ. ಬೇರೆ ವಿಧಿಯಿಲ್ಲ. ಆಕಾಶವನ್ನು ಎಷ್ಟೇ ದಿಟ್ಟಿಸಿ ನೋಡಿದರೂ ಬೆಳಕು ತೋರುತ್ತಿಲ್ಲ. ಮೋಡ ಆವರಿಸಿಕೊಂಡಿದ್ದು ಕಂಡರೆ ಇನ್ನೂ ಮೂರು ದಿನಗಳು ಹೀಗೆಯೇ. ಮಳೆ ಮತ್ತು ಮಳೆ ಮತ್ತೂ ಮಳೆಯೇ. ಹವಾಮಾನ ಇಲಾಖೆಯವರೂ ಇದನ್ನೇ ಪುನರುಚ್ಚರಿಸಿದ್ದಾರೆ. ಮಕ್ಕಳಿಗೇನೋ ಶಾಲೆಗೆ ರಜೆ ಘೋಷಿಸಿಯಾಗಿದೆ.
ಮಕ್ಕಳು ಮನೆಯಲ್ಲಿ ಕುಳಿತು "ಊನೋ'ವನ್ನೋ, ಮೊಬೈಲ್ ಅನ್ನೋ ಹಿಡಿದು ಮಳೆಯಂತೆಯೇ ಕುಳಿತು ಬಿಡಬಹುದು ಚೂರು ಅಲ್ಲಾಡದಂತೆ. ಗಂಟೆಗಟ್ಟೆಲೆ ಹೋದದ್ದು ತಿಳಿಯುವುದೇ ಇಲ್ಲ. ಆಮೇಲೆ ಅಮ್ಮನೇ ಏಳಿಸಬೇಕು ಊಟಕ್ಕೆ. ಟಿವಿ ಹಾಕಿಕೊಳ್ಳೋಣ ಸ್ವಲ್ಪ ಹೊತ್ತು ಯಾವುದೋ ಧಾರಾವಾಹಿ ಬರಬಹುದು ಎನ್ನುವುದಾದರೆ ಅದಕ್ಕೂ ಕೇಬಲ್ ಬರುತ್ತಿಲ್ಲ.
ಕರೆಂಟ್ ಸಹ ಆಗಾಗ್ಗೆ ಬಂದು ಹೋಗುತ್ತಿದೆ. ನಿನ್ನೆ ಇಡೀ ರಾತ್ರಿ ಕರೆಂಟಿರಲಿಲ್ಲ. ಇನ್ವರ್ಟರ್ ಇಷ್ಟು ಹೊತ್ತು ಬಂದದ್ದೇ ಅಚ್ಚರಿ. ಅದಕ್ಕೇ ಏನೂ ಮಾಡದೇ ಕಿಟಕಿಯಿಂದ ಹೊರಗೆ ರಸ್ತೆಯನ್ನು ನೋಡುತ್ತಾ ಕುಳಿತುಕೊಳ್ಳುವುದು ಬಿಟ್ಟರೆ ಬೇರೆ ಯಾವ ಕೆಲಸವೂ ಇಲ್ಲ.
ನಮ್ಮದು 25 ಅಂತಸ್ತುಗಳಿರುವ ವಸತಿ ಸಮುಚ್ಚಯ. ಅಲ್ಲಿ 15 ನೇ ಅಂತಸ್ತಿನಲ್ಲಿದ್ದೇನೆ. ಸಾಮಾನ್ಯವಾಗಿ ನಾನು ಇತ್ತೀಚಿನ 10 ವರ್ಷಗಳಿಂದ ಈ ಮಳೆಗಾಲದಲ್ಲಿ, ಅದರಲ್ಲೂ ಹೀಗೆ ಮಳೆಯ ಕಾಲದಲ್ಲಿ ಲಿಫ್ಟ್ ಗಳನ್ನು ಹತ್ತುವುದಿಲ್ಲ. ಒಂದು ರೀತಿಯ ಅವ್ಯಕ್ತವಾದ ಭಯ ಕಾಡುತ್ತದೆ ಲಿಫ್ಟ್ ಏರಲು.
ಸುಮಾರು 5 ವರ್ಷಗಳಿರಬಹುದು. ಹೀಗೆಯೇ ಮಳೆ ಜೋರಾಗಿತ್ತು. ಎಡೆಬಿಡದ ಮಳೆ ಯಾವುದಕ್ಕೂ ಪುರಸೊತ್ತು ನೀಡಿರಲಿಲ್ಲ. ಹೀಗೆಯೇ ನಮ್ಮ ಮೇಲಿನ ಅಂತಸ್ತಿನವರೊಬ್ಬರು ಕೆಳಗೆ ಬರಲು ಲಿಫ್ಟ್ ಹತ್ತಿದಾಗ ಕರೆಂಟು ಹೋಗಿ ಸಿಲುಕಿಕೊಂಡಿದ್ದು ಇನ್ನೂ ನೆನಪಿದೆ. ಅವರು ಕೂಗಿಕೊಂಡದ್ದು, ಅವರ ಕುಟುಂಬದ ಗೋಳಾಟ, ಟೆಕ್ನಿಕಲ್ ಆμàಸರ್ ಬಂದು ಹರಸಾಹಸ ಪಟ್ಟಿದ್ದು.. ಏನೇನೋ ಆಗಿ ಕೊನೆಗೆ ಸುಮಾರು ಅರ್ಧ ಗಂಟೆಯ ಹೊತ್ತಿಗೆ ಸಮಸ್ಯೆ ಬಗೆಹರಿದು, ಹೈರಾಣಾಗಿದ್ದ ಆ ಮನೆಯವರು ಹೊರಗೆ ಬಂದಿದ್ದು.. ಎಲ್ಲವೂ ಭಯಾನಕ ಘಟನೆಯಂತೆ ನಡೆದಿತ್ತು. ಅಂದಿನಿಂದ ಸಾಮಾನ್ಯವಾಗಿ ನಡೆದೇ ಹೋಗುತ್ತೇನೆ.
ಈಗಲೂ ತಾರಸಿಯ ಮೇಲೆ ಹೋಗಲು ಇಚ್ಛೆ ಇದೆ. ಆದರೆ ಅಮ್ಮ, ಗಾಳಿ ಜೋರಾಗಿದೆ, ಮೇಲೆ ಹೋಗ ಬೇಡ ಎಂದಳು. ಆಯಿತು ಎಂದೆ. ಕೆಳಗೆ ಹೋಗೋಣವೆಂದರೂ ನೆಲಮಹಡಿ ತುಂಬಾ ನೀರು ತುಂಬಿದೆಯಂತೆ. ಮಳೆ ಜೋರಾದರೆ 1ನೇ ಮಹಡಿಗೂ ಬರಬಹುದೇನೋ ಎಂಬ ಮಾಹಿತಿ, ನನ್ನ ಪತ್ನಿ ಕೊಟ್ಟಳು.
ಆದರೂ ಕೆಳಗಿನ ಮಹಡಿಗೆ ಹೊರಟೆ. ಅಲ್ಲಿನ ಒಂದು ಮನೆಯಲ್ಲಿ ಪತಿ ಪತ್ನಿಯರ ವಾಗ್ವಾದ ನಡೆಯುತ್ತಿತ್ತು. "ನೀವು ಇಷ್ಟು ವರ್ಷವಾದರೂ ಈ ಬಾಂಬೆಯಲ್ಲಿದ್ದು ಯಾವಾಗ ಏನಾಗುತ್ತೆ ಅಂತಾ ಸರಿಯಾಗಿ ಅರ್ಥ ಮಾಡಿಕೊಂಡೇ ಇಲ್ಲ' ಎನ್ನುತ್ತಿದ್ದಳು ಪತ್ನಿ. ಅದಕ್ಕೆ ಪ್ರತಿಯಾಗಿ, ಆಯಿತು ಮಾರಾಯ್ತಿ, ಚೂರು ಮಳೆ ಕಡಿಮೆಯಾಗಲಿ. ಟ್ಯಾಕ್ಸಿ ಮಾಡ್ಕೊಂಡಾದ್ರೂ ಹೋಗಿ ತಂದು ಕೊಡ್ತೀನಿ ಎಂದು ಸಮಾಧಾನ ಪಡಿಸುತ್ತಿದ್ದ ಪತಿ. ವಾಗ್ವಾದ ಬೆಳೆಯುತ್ತಲೇ ಇತ್ತು. ಇದೂ ಒಂದು ರೀತಿಯ ಹೊರಗಿನ ಮಳೆಯಂತೆಯೇ ಅನಿಸುತ್ತಿತ್ತು.
ಹೇಗಾದರೂ ತಡೆಯಲೇಬೇಕೆಂದು ಕರೆಗಂಟೆ ಒತ್ತಿದೆ. ಈ ಮಳೆಯಲ್ಲಿ ಯಾರಯ್ಯ ಎನ್ನುತ್ತಲೇ ಒಳಗಿನಿಂದ ಪ್ರಕಾಶ್ ಬಾಗಿಲು ತೆಗೆದರು. ನನ್ನನ್ನು ಕಾಣುತ್ತಲೇ ಸ್ವಲ್ಪ ತಿಳಿಯಾಗಿ, ಏನು ಬಂದದ್ದು, ಬನ್ನಿ ಎಂದರು. ಹೀಗೆ ಇನ್ನೊಬ್ಬರ ಮನೆಗೆ ಹೋಗುವುದೇ ಕಡಿಮೆ. ಲಿಫ್ಟ್ ನಲ್ಲೋ, ಅಂತಸ್ತಿನ ಕೆಳಗೆ ಇಳಿಯುವಾಗ ಕಂಡರೂ ಹೆಚ್ಚೆಂದರೆ ಒಂದು ಮುಗುಳ್ನಗೆಯಷ್ಟೆ. ವರ್ಷಕ್ಕೊಮ್ಮೆ ಎಲ್ಲೋ ಏನೋ, ಎರಡು ಮಾತು ಅಷ್ಟೇ.
ಈಗ ನಾನೇ, ಜೋರು ಮಳೆ. ಬನ್ನಿ, ಒಂದು ಚಹಾ ಕುಡಿಯೋಣವೆಂದು ಆಹ್ವಾನಿಸಿದೆ. ಆಹ್ವಾನ ಇಷ್ಟವಾಯಿತು ಅನ್ನಿಸುತ್ತದೆ. ಇಬ್ಬರೂ ನನ್ನನ್ನು ಹಿಂಬಾಲಿಸಿದರು. ಒಲೆಯ ಮೇಲೆ ಚಹಾ ಸೊಪ್ಪು ಬೇಯತೊಡಗಿತು. ಅದಕ್ಕೂ ಚಳಿ ಎನ್ನುವ ಹಾಗೆ. ಅದರ ಪರಿಮಳ ವ್ಯಾಪಿಸಿಕೊಳ್ಳತೊಡಗಿತು. ನಾಲ್ಕು ಚಹಾ ಒಂದು ಕಾಫಿ. ಬಿಸಿ ಚಹಾ, ಜತೆಗೆ ಸ್ವಲ್ಪ ಕರುಕುರುಂ ಮಿಕ್ಸರ್...ಒಂದಿಷ್ಟು ಮಾತು. ಹೊರಗೆ ಮತ್ತೊಂದಿಷ್ಟು ಮಳೆ. ನಿಜ, ಹೀಗೆ ಕುಳಿತು ಮಾತನಾಡಿದ್ದೇ ಇಲ್ಲ. ಪರವಾಗಿಲ್ಲ, ಒಂದು ಚಹಾ ಹೇಗೆ ನಮ್ಮನ್ನು ಬಂಧಿಸಿತಲ್ಲ! ಬೊಂಬಾಯಿಯಲ್ಲಿ ಹೀಗೆಯೇ..ಒಂದು ಚಹಾ ಸಾಕು ಬಂಧಿಸಲು !
*ಮಧುವಂತಿ

