Dailyhunt Logo
  • Light mode
    Follow system
    Dark mode
    • Play Story
    • App Story
ಅಭಿಷೇಕ್‌ ಅಬ್ಬರ: ವಿಂಡೀಸ್‌ ವಿರುದ್ಧ ಇಂಡಿಯಾ ಜಯಭೇರಿ

ಅಭಿಷೇಕ್‌ ಅಬ್ಬರ: ವಿಂಡೀಸ್‌ ವಿರುದ್ಧ ಇಂಡಿಯಾ ಜಯಭೇರಿ

ಇಂದೋರ್‌: ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ (69) ಮತ್ತು ಅರ್ಶದೀಪ್‌ ಸಿಂಗ್‌ ಅವರ ಬೌಲಿಂಗ್‌ ದಾಳಿಯ (3 ವಿಕೆಟ್‌) ನೆರವಿನಿಂದ ವೆಸ್ಟ್ ಇಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 14 ರನ್‌ಗಳ ರೋಚಕ ಜಯ ಗಳಿಸಿದೆ. ಭಾನುವಾರದ ಪಂದ್ಯದಲ್ಲಿ ಗೆಲ್ಲಲು ವಿಂಡೀಸ್‌ ಹೋರಾಡಿತಾದರೂ ಭಾರತದ ಬೌಲರ್‌ಗಳು ನಿಯಂತ್ರಿಸಿದ್ದರಿಂದ ಗುರಿ ಮುಟ್ಟಲಾಗದೆ ಸೋಲೊಪ್ಪಿಕೊಂಡಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 20 ಓವರ್‌ಗಳಲ್ಲಿ 223 ರನ್‌ ಬಾರಿಸಿ ಆಲೌಟ್‌ ಆಯಿತು. ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್‌ ಕಳೆದುಕೊಂಡು 209 ರನ್‌ ಬಾರಿಸಲಷ್ಟೇ ಶಕ್ತವಾಯಿತು.

ಭಾರತ ಪರ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್‌ 3ಕ್ಕೆ ನಿರಾಸೆ ಅನುಭವಿಸಿದರು. ಆದರೆ ಅಭಿಷೇಕ್‌ ಶರ್ಮಾ 69, ಇಶಾನ್‌ ಕಿಶನ್‌ 37, ತಿಲಕ್‌ ವರ್ಮಾ 28, ನಮನ್‌ 10, ನಿತೀಶ್‌ ರೆಡ್ಡಿ 21, ಅಕ್ಷರ್ 20 ರನ್‌ ಬಾರಿಸಿದರು. ಅದಾಗಿ ಅರ್ಶದೀಪ್‌, ಪ್ರಿನ್ಸ್‌ ತಮ್ಮ ರನ್‌ ಕಾಣಿಕೆ ಸಲ್ಲಿಸಿದರು. ಈ ವೇಳೆ ವಿಂಡೀಸ್‌ನ ರೋಸ್ಟನ್‌ ಚೇಸ್‌, ಶಮರ್‌ ಜೋಸೆಫ್‌, ಶಮರ್ ಸ್ಟ್ರಿಂಗರ್‌ ತಲಾ 2 ವಿಕೆಟ್‌ ಕೆಡವಿ ಗಮನ ಸೆಳೆದರು.

ಪೂರನ್‌, ಹೆಟ್ಮೈಯರ್ ಹೋರಾಟ ವ್ಯರ್ಥ:

ಇನಿಂಗ್ಸ್‌ಗೆ ಇಳಿದ ವೆಸ್ಟ್‌ ಇಂಡೀಸ್‌ ಪರ ಕಮಿಲ್‌ ಪೂರನ್‌ 27 ಎಸೆತಕ್ಕೆ 42 ರನ್‌ ಬಾರಿಸಿದರೆ ಶಿಮ್ರನ್‌ ಹೆಟ್ಮೈಯರ್‌ 26 ಎಸೆತಗಳಲ್ಲಿ 43 ರನ್‌ ಸಿಡಿಸಿ ಹೋರಾಟ ನೀಡಿದರು. ಇನ್ನು ಶರ್ಫೇನ್‌ ರುದರ್ಫೋರ್ಡ್‌ ಸಹ 20ಕ್ಕೆ 32 ರನ್‌ ಸೇರಿಸಿದರು. ಆದರೆ ತಂಡದ ಇತರ ಬ್ಯಾಟರ್‌ಗಳ ಬೆಂಬಲವಿಲ್ಲದೆ ವಿಂಡೀಸ್‌ ಶರಣಾಯಿತು.

ಸಂಕ್ಷಿಪ್ತ ಸ್ಕೋರ್‌:

ಭಾರತ 20 ಓವರ್‌, 223/10 (ಅಭಿಷೇಕ್‌ 69, ಇಶಾನ್‌ 37, ತಿಲಕ್‌ 28, ಚೇಸ್‌ 38ಕ್ಕೆ 2, ಸ್ಪ್ರಿಂಗರ್‌ 50ಕ್ಕೆ 2). ವೆಸ್ಟ್‌ ಇಂಡೀಸ್‌ 20 ಓವರ್‌, 209/7 (ಕಮಿಲ್‌ ಪೂರನ್‌ 42, ಶಿಮ್ರನ್‌ ಹೆಟ್ಮೈಯರ್ 43, ಅರ್ಶದೀಪ್‌ ಸಿಂಗ್‌ 44ಕ್ಕೆ 3, ನಮನ್‌ ಧೀರ್ 39ಕ್ಕೆ 2).

ಭಾರತ 3ನೇ ಗರಿಷ್ಠ ಮೊತ್ತ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವೊಂದರಲ್ಲಿ ತಂಡವೊಂದು ಆಲೌಟ್ ಆದರೂ ಸಹ 3ನೇ ಗರಿಷ್ಠ ಮೊತ್ತ ಕಲೆ ಹಾಕಿದ ಸಾಧನೆಗಾಗಿ ಭಾರತ (223 ರನ್‌) ಗುರುತಿಸಿಕೊಂಡಿದೆ. ಈ ದಾಖಲೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಟರ್ಕಿ, 2025ರಲ್ಲಿ ಬಲ್ಗೇರಿಯಾ ವಿರುದ್ಧ 237 ರನ್‌ ಬಾರಿಸಿತ್ತು. ಇನ್ನು 2ನೇ ಸ್ಥಾನಿ ನ್ಯೂಜಿಲೆಂಡ್‌ ಇದೇ ವರ್ಷ ಭಾರತ ವಿರುದ್ಧ 225 ರನ್‌ ಗಳಿಸಿತ್ತು.

18 ಎಸೆತಗಳಲ್ಲಿ ಫಿಫ್ಟಿ!

ಅಭಿಷೇಕ್ ಶರ್ಮಾ, ಕೇವಲ 18 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ಪಂದ್ಯಕ್ಕೆ ರಂಗು ತುಂಬಿದರು. ಇದು ಅವರ 14ನೇ ಅರ್ಧಶತಕವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani