ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಜಧಾನಿ ಅಬುಧಾಬಿಯಲ್ಲಿ ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ವಾಯುಪಡೆ ತಡೆದು ಹೊಡೆದುರುಳಿಸಿದ ವೇಳೆ, ಅವುಗಳ ಅವಶೇಷಗಳು ವಸತಿ ಪ್ರದೇಶದ ಮೇಲೆ ಬಿದ್ದ ಪರಿಣಾಮ ಐವರು ಭಾರತೀಯರು ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿರುವುದಾಗಿ ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ವಾಯುಪಡೆಯು ಇರಾನ್‌ನಿಂದ ಬಂದ 18 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 4 ಕ್ರೂಸ್ ಕ್ಷಿಪಣಿಗಳು ಮತ್ತು 47 ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ವೇಳೆ ಕ್ಷಿಪಣಿಯ ಅವಶೇಷಗಳು ವಸತಿ ಪ್ರದೇಶದ ಮೇಲೆ ಬಿದ್ದು ಹದಿನೇಳು ಮಂದಿ ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಐವರು ಭಾರತೀಯರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ ಏಳು ಮಂದಿ ನೇಪಾಳ ಮೂಲದವರಾಗಿದ್ದಾರೆ. ಇವರಲ್ಲಿ ಒಬ್ಬ ನೇಪಾಳಿ ಪ್ರಜೆಯ ಸ್ಥಿತಿ ಗಂಭೀರವಾಗಿದ್ದು, ಉಳಿದ ಆರು ಮಂದಿಗೆ ಸಾಧಾರಣ ಗಾಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ದಾಳಿಯ ಮೂಲ ಅಥವಾ ಸ್ವರೂಪದ ಬಗ್ಗೆ ಯುಎಇ ಅಧಿಕೃತವಾಗಿ ಮಾಹಿತಿ ನೀಡಿಲ್ಲವಾದರೂ, ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಸಂಘರ್ಷದ ಭಾಗವಾಗಿ ಇರಾನ್ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಸಮಯದಲ್ಲಿಯೇ ಈ ಘಟನೆ ನಡೆದಿದೆ.
ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಹಬಶಾನ್ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಅಬುಧಾಬಿ ಮಾಧ್ಯಮ ಕಚೇರಿ ತಿಳಿಸಿದೆ.
ಇರಾನ್ ತನ್ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

