Dailyhunt Logo
  • Light mode
    Follow system
    Dark mode
    • Play Story
    • App Story
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು

ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಪ್ರಸಿದ್ಧ ಹಾಗೂ ಮನಮೋಹಕ ಪ್ರವಾಸಿ ತಾಣವಾದ ದೇವರಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲಾಖೆಯ ಬೇಜವಾಬ್ದಾರಿತನಕ್ಕೆ ಬೇಸತ್ತ ಸ್ಥಳೀಯ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.

ದೇವರಮನೆ ಗುಡ್ಡದ ಸೌಂದರ್ಯ ಸವಿಯಲು ವಾರಾಂತ್ಯದ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಸದ್ಯ ಈ ಸಂಪರ್ಕ ರಸ್ತೆಯುದ್ದಕ್ಕೂ ಬೃಹತ್ ಗುಂಡಿ-ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯ ಅವಸ್ಥೆಯಿಂದಾಗಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ವಾರಾಂತ್ಯದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಯಾವುದೇ ಸರ್ಕಾರಿ ನೆರವಿಗಾಗಿ ಕಾಯದೇ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಜಿತ್. ತಾರನಾಥ್ ಆಧುನಿಕ. ಸತೀಶ್. ರಂಜಿತ್. ವೀರೇಶ್. ಮೊದಲಾದವರಿದ್ದರು.

ದೇವರಮನೆ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿದ್ದರೂ ರಸ್ತೆ ಸಂಪೂರ್ಣ ಹಾಳಾಗಿರುವುದು ದುರದೃಷ್ಟಕರ. ಪ್ರತಿದಿನ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಹಲವು ಬಾರಿ ಮನವಿ ಮಾಡಿದರೂ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ. ಜನರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ನಾವೇ ಸ್ವಯಂಪ್ರೇರಿತರಾಗಿ ರಸ್ತೆ ದುರಸ್ತಿ ಮಾಡಿದ್ದೇವೆ. ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ಈ ರಸ್ತೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಬೇಕು.
-ಗೌತಮ್ ಕೋಗಿಲೆ, ಸ್ಥಳೀಯ ಗ್ರಾಮಸ್ಥರು

Dailyhunt
Disclaimer: This content has not been generated, created or edited by Dailyhunt. Publisher: Udayavani