Sunday, 19 Jul, 7.01 am ಉದಯವಾಣಿ

ಉಡುಪಿ
ಅಕ್ಷರ ನಮನ: ವಿನಯಶೀಲ ವಿದ್ವಾಂಸ ಡಾ| ಯು. ಪಿ. ಉಪಾಧ್ಯಾಯರು

ಭಾಷಾಭ್ಯಾಸದ ಕ್ಷೇತ್ರದಲ್ಲಿ ‘ತುಳು ನಿಘಂಟು’ ಸಂಪುಟಗಳ ಮೂಲಕ ಒಂದು ಶಾಶ್ವತ ಸ್ಥಾನವನ್ನು ಗಳಿಸಿಕೊಂಡ ನಿಘಂಟು ಸಂಪಾದಕ, ಭಾಷಾ ವಿಜ್ಞಾನಿ, ಜನಪದ ತಜ್ಞ, ಲೇಖಕ, ಬಹುಭಾಷಾ ವಿದ್ವಾಂಸ ಡಾ|ಉಳಿಯಾರು ಪದ್ಮನಾಭ ಉಪಾಧ್ಯಾಯರು ಶುಕ್ರವಾರ (17-7-2020) ನಮ್ಮನ್ನಗಲಿದರೆಂಬ ವಾರ್ತೆ ಭಾಷಾಧ್ಯಯನಾಸಕ್ತರೆಲ್ಲರಿಗೆ ತುಂಬ ದುಃಖವನ್ನುಂಟುಮಾಡಿದ ಸುದ್ದಿ ಆಗಿದೆ.

ಉಡುಪಿಯ ಕಾಪು ಸಮೀಪದ ಉಳಿಯಾರು ಡಾ| ಉಪಾಧ್ಯಾಯರ ಹುಟ್ಟೂರು. ವಿದ್ಯೆ ಮತ್ತು ಆಸಕ್ತಿ ಇವುಗಳ ಆಧಾರದಿಂದ ಅವರು ಸುತ್ತಿದ ಊರು ಹಲವಾರು, ಮಾಡಿದ ವೃತ್ತಿ ವಿವಿಧ ರೂಪದವು, ಗಳಿಸಿಕೊಂಡ ಅನುಭವ ಅಪಾರ. ಎಲ್ಲೇ ವೃತ್ತಿಜೀವನ ನಡೆಸಿದರೂ ಅವರು ಭಾಷಾಭ್ಯಾಸದ ಕ್ಷೇತ್ರದಲ್ಲೇ ದುಡಿದರು. ಅವರ ಸಾಧನೆಗಳಿಗೆಲ್ಲ ಕಿರೀಟ ಪ್ರಾಯವಾದುದು ಅವರ ಪ್ರಧಾನ ಸಂಪಾದಕತ್ವದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಪ್ರಕಟಗೊಂಡು ಪ್ರಸಿದ್ಧವಾದ ತುಳು ನಿಘಂಟು.

ಡಾ| ಉಪಾಧ್ಯಾಯರು ವೈದಿಕ ಅಭ್ಯಾಸದ ಪರಂಪರೆಗೆ ಸೇರಿದವರು. ಬಾಲ್ಯದಲ್ಲಿ ವೇದಾಭ್ಯಾಸ ಸಂಸ್ಕೃತಾಭ್ಯಾಸ ಮಾಡಿ ಮುಂದೆ ಸಂಸ್ಕೃತ ಮತ್ತು ಭಾಷಾ ವಿಜ್ಞಾನಗಳಲ್ಲಿ ವಿಶೇಷಾಧ್ಯಯನ ಮಾಡಿದರು. ಭಾಷಾ ವಿಜ್ಞಾನದಲ್ಲಿ ಪಿಎಚ್‌.ಡಿ. ಪದವಿ ಪಡೆದರು. ಬೆಂಗಳೂರಿನ ಕಾಲೇಜೊಂದರಲ್ಲಿ ಸಂಸ್ಕೃತ ಅಧ್ಯಾಪಕರಾದರು. ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ (ಸಿ.ಐ.ಐ.ಎಲ್‌.) ಯಲ್ಲಿ ಸಂಶೋಧಕರಾಗಿ, ಲೇಖಕರಾಗಿ ದುಡಿದರು.

ಈ ಕೆಲಸಗಳನ್ನು ಮಾಡುತ್ತಾ ಹಿಂದಿ, ಫ್ರೆಂಚ್‌, ಮಲಯಾಳ ಭಾಷೆಗಳನ್ನು ಕಲಿತರು. ಅವರ ಪತ್ನಿ ಡಾ| ಸುಶೀಲಾ ಉಪಾಧ್ಯಾಯರಿಗೆ ಅಧ್ಯಯನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿದ್ದಲ್ಲದೆ ಇಬ್ಬರೂ ಸೇರಿ ಗ್ರಂಥ ರಚನೆಯನ್ನು ಮಾಡಿದರು. ಬ್ಯಾರಿ ಭಾಷೆಯ ಭಾಷಾ ಶಾಸ್ತ್ರೀಯ ಅಧ್ಯಯನ ಮಾಡಲು ಸುಶೀಲಾ ಅವರನ್ನು ಪ್ರೋತ್ಸಾಹಿಸಿದರು. ಇದರಿಂದಾಗಿ ಇಬ್ಬರೂ ಭಾಷಾ ವಿಜ್ಞಾನಿಗಳೆಂದು ಪರಿಗಣಿತರಾದರು.

ಪುಣೆಯಲ್ಲಿ ಕೆಲವು ವರ್ಷ ನೆಲೆಸಿದ ಡಾ| ಉಪಾಧ್ಯಾಯರು ಅಲ್ಲಿ ಭಾಷಾ ವಿಜ್ಞಾನದ ಆಧಾರದಲ್ಲಿ ಗುಲ್ಬರ್ಗ ಕನ್ನಡ, ನಂಜನಗೂಡು ಕನ್ನಡ ಮತ್ತು ಕೂರ್ಗ್‌ ಕನ್ನಡ (ಕೊಡಗಿನ ಜೇನು ಕುರುಬರ ಆಡು ನುಡಿಯ ಅಧ್ಯಯನ) ಕೃತಿಗಳನ್ನು ಹೊರ ತಂದರು. ಮುಂದೆ ಆಫ್ರಿಕಾದ ಸೆನೆಗಲ್‌ನ ಡಕಾರ್‌ ವಿಶ್ವವಿದ್ಯಾನಿಲಯದಲ್ಲಿ ಭಾಷಾ ಸಂಶೋಧನೆ-ಬೋಧನೆಗಳ ಅವಕಾಶವಾದಾಗ ಅಲ್ಲಿದ್ದು ಅಲ್ಲಿಯ ಭಾಷೆಗೆಳ ಬಗೆಗೆ ಅಧ್ಯಯನ ಮಾಡಿದರು. ಜಾನಪದ ಕ್ಷೇತ್ರ ಕಾರ್ಯ ಮೊದಲಾದ ಕ್ಷೇತ್ರಗಳಲ್ಲಿಯೂ ದುಡಿದರು. ದ್ರಾವಿಡ ಮತ್ತು ಆಫ್ರಿಕಾ ಸಂಬಂಧದ ಕುರಿತಾಗಿ “ದ್ರಾವಿಡಿಯನ್‌ ಆಯಂಡ್‌ ನೀಗ್ರೋ ಆಫ್ರಿಕನ್‌’ ಎಂಬ ಕೃತಿ ರಚನೆ ಮಾಡಿದರು.

1979ರಲ್ಲಿ ಉಡುಪಿಯಲ್ಲಿ ತುಳು ನಿಘಂಟು ಯೋಜನೆ ಆರಂಭಗೊಂಡಾಗ. ಪ್ರೊ| ಕು.ಶಿ.ಹರಿದಾಸ ಭಟ್ಟರ ಅಪೇಕ್ಷೆಯಂತೆ ಆ ಯೋಜನೆಗೆ ಸೇರಿದ ಮೇಲೆ ಆ ಕಾರ್ಯವನ್ನು ಪೂರ್ತಿಗೊಳಿಸದೆ ವಿರಾಮ ಬಯಸಲಿಲ್ಲ. ಮುಖ್ಯವಾಗಿ ಕ್ಷೇತ್ರ ಕಾರ್ಯವನ್ನು ಆಧರಿಸಿದ ವಿಶ್ವ ಕೋಶೀಯ ಕ್ರಮದಲ್ಲಿ ರಚಿತವಾದ ತುಳು ಲೆಕ್ಸಿಕನ್‌ ಎಂಬುದು ಅದಾಗಲೇ ಪ್ರಸಿದ್ಧವಾದ ಮಲೆಯಾಳ ಲೆಕ್ಸಿಕನ್‌ ಮತ್ತು ತಮಿಳು ಲೆಕ್ಸಿಕನ್‌ಗಳಿಗಿಂತ ತುಂಬ ಮುಂದುವರಿದುದು ಮತ್ತು ಭಾಷಾಜ್ಞಾನ ಸಂಶೋಧನೆಗಳ ದೃಷ್ಟಿಯಿಂದ ಹೆಚ್ಚು ಪ್ರಯೋಜನಕರ ವೆಂದು ವಿದ್ವಾಂಸರಿಂದ ಹೊಗಳಲ್ಪಟ್ಟಿದೆ. ಹತ್ತೂಂಬತ್ತು ವರ್ಷಗಳ ಸತತ ಪ್ರಯತ್ನದಲ್ಲಿ ನಿಘಂಟುವಿನ ಆರು ಸಂಪುಟಗಳು ಹೊರ ಬಂದವು.

ತುಳು ನಿಘಂಟುವಿಗಾಗಿ ಕ್ಷೇತ್ರ ಕಾರ್ಯ ಮಾಡಿದ ಉಪಾಧ್ಯಾಯರು ತುಳುನಾಡಿನ ಜಾನಪದದ ಬಗೆಗೆ ಆಳವಾಗಿ ಅಧ್ಯಯನ ಮಾಡಿದರು. ಭೂತಾರಾಧನೆಯ ಬಗೆಗೆ ಇಂಗ್ಲಿಷಿನಲ್ಲಿ ಕೃತಿ ರಚಿಸಿದರು. ಭಾಷಾ ವಿಜ್ಞಾನ ಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದರು. ತುಳು ಕಲಿಯುವ ವರಿಗಾಗಿ ತುಳು ಕೈ ಪಿಡಿ ಸಿದ್ಧಪಡಿಸಿದರು. ಸಂಕ್ಷಿಪ್ತ ತುಳು ಕೋಶವೊಂದನ್ನು ರಚಿಸಿದರು. ಇಂಗ್ಲಿಷ್‌, ಕನ್ನಡಗಳಲ್ಲಿ ಲೇಖನ ವ್ಯವಸಾಯವನ್ನು ಸತತವಾಗಿ ನಡೆಸಿದರು. ಇಷ್ಟೆಲ್ಲ ಅವಿಶ್ರಾಂತವಾದ ದುಡಿಮೆ ಮಾಡಿದ ಉಪಾಧ್ಯಾಯರದ್ದು ಸರಳ ವ್ಯಕ್ತಿತ್ವ. ಅಹಂಕಾರದ ಸೋಂಕೇ ಇಲ್ಲದೆ ನಯವಿನಯವಂತರಾದ ವಿದ್ವಾಂಸ ರವರು.

ಕಾಂತಾವರ ಕನ್ನಡ ಸಂಘವು ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಅವರ ಬಗೆಗೆ ಪುಸ್ತಕ ಪ್ರಕಟಿಸಿದೆ. ಉಪಾಧ್ಯಾಯ ದಂಪತಿಯ ಅಭಿನಂದನಾಗ್ರಂಥ “ಕೊಪ್ಪರಿಗೆ’ (2013)ಮೊಗಸಾಲೆ ಪ್ರಕಾಶನದಿಂದ ಹೊರಬಂದಿದೆ. ಅವರಿಗೆ ಈ ಗ್ರಂಥದ ಸಮರ್ಪಣೆ ಅಭಿನಂದನೆಯ ದಿನದಂದೇ ಶ್ರೀಮತಿ ಸುಶೀಲಾ ಉಪಾಧ್ಯಾಯರು ಅನಾರೋಗ್ಯ ಪೀಡಿತರಾಗಿ ಅಗಲಿದ ಮೇಲೆ ಒಂಟಿಯಾಗಿ ಜೀವಿಸಿದ ಉಪಾಧ್ಯಾಯರು ಶುಕ್ರವಾರ ನಮ್ಮನ್ನಗಲಿದ್ದಾರೆ. ಸತತ ಅಧ್ಯಯನಶೀಲತೆ ವಿನಯ ಅವರಿಂದ ನಾವು ಕಲಿಯಬೇಕಾದ ಗುಣಗಳು.

– ಡಾ| ಪಾದೆಕಲ್ಲು ವಿಷ್ಣು ಭಟ್ಟ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top