ಬೆಂಗಳೂರು: ಮುಂಬರುವ 'ಪ್ರೈಮ್ ಡೇ 2026'ರ ಹಿನ್ನೆಲೆ, ಅಮೆಜಾನ್ ಇಂಡಿಯಾ ಲಕ್ಷಾಂತರ ಭಾರತೀಯ ಮಾರಾಟಗಾರರು (MSME) ಮತ್ತು ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ 'ಎಐ-ಚಾಲಿತ ಸೆಲ್ಲರ್ ಅಸಿಸ್ಟೆಂಟ್' (AI-Powered Seller Assistant) ಬಿಡುಗಡೆ ಮಾಡಿದೆ.
ಇಂಗ್ಲಿಷ್ ಭಾಷೆಗಳಲ್ಲಿ 24x7 ಲಭ್ಯವಿರುವ ಈ ಕಾನ್ವರ್ಸೇಷನಲ್ ಎಐ, ವ್ಯಾಪಾರವನ್ನು ಅತ್ಯಂತ ಸುಲಭವಾಗಿ ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು ನೆರವಾಗಲಿದೆ.
ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು:
ಕ್ಯಾಟಲಾಗ್ ರಚನೆ ಅತ್ಯಂತ ಸುಲಭ: ಕೇವಲ 1 ಚಿತ್ರ ಅಥವಾ ಯುಆರ್‌ಎಲ್ (URL) ನೀಡಿದರೆ ಸಾಕು, ಈ ಎಐ ತಂತ್ರಜ್ಞಾನ ಉತ್ಪನ್ನದ ಶೀರ್ಷಿಕೆ ಮತ್ತು ವಿವರಗಳ ಶೇ. 70ರಷ್ಟು ಭಾಗವನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ. ಇದರಿಂದ ಗಂಟೆಗಳ ಕಾಲ ಹಿಡಿಯುವ ಕೆಲಸ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತದೆ.
ಸ್ಮಾರ್ಟ್ ಇನ್ವೆಂಟರಿ ನಿರ್ವಹಣೆ: ಯಾವ ಉತ್ಪನ್ನವನ್ನು ಯಾವಾಗ ದಾಸ್ತಾನು (Restock) ಮಾಡಬೇಕು ಎಂಬ ಬಗ್ಗೆ ನಿಖರವಾದ ಹಾಗೂ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಇದು ನೀಡುತ್ತದೆ.
ಜಾಗತಿಕ ವ್ಯಾಪಾರ ವಿಸ್ತರಣೆ: ಭಾರತೀಯ ಮಾರಾಟಗಾರರು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು, ಅಲ್ಲಿನ ಸ್ಥಳೀಯ ನಿಯಮಗಳು (Compliance) ಮತ್ತು ಬೇಡಿಕೆಗಳ ಬಗ್ಗೆ ಹಂತ-ಹಂತದ ಮಾರ್ಗದರ್ಶನವನ್ನು ಈ ಅಸಿಸ್ಟೆಂಟ್ ಒದಗಿಸುತ್ತದೆ.
ಜಾಹೀರಾತು ಮತ್ತು ಗ್ರಾಹಕರ ವಿಮರ್ಶೆ: 'CODE' ಕಾರ್ಯಕ್ರಮದ ಮೂಲಕ ಜಾಹೀರಾತುಗಳನ್ನು ಉತ್ತಮಗೊಳಿಸಲು ಮತ್ತು 'ಅಮೆಜಾನ್ ವೈನ್' ಮೂಲಕ ಅಧಿಕೃತ ವಿಮರ್ಶೆಗಳನ್ನು ಪಡೆಯಲು ಇದು ಸಹಾಯ ಮಾಡುತ್ತದೆ.
ಎಐ ಮೂಲಕ ಶೇ. 70ರಷ್ಟು ಸಮಯ ಉಳಿತಾಯ
ಅಮೆಜಾನ್‌ನ ಸೆಲ್ಲರ್ ಎಕ್ಸ್‌ಪೀರಿಯೆನ್ಸ್ ನಿರ್ದೇಶಕ ಅಭಿಜಿತ್ ಕಾಮ್ರಾ ಅವರ ಪ್ರಕಾರ, ʼಈ ಎಐ ತಂತ್ರಜ್ಞಾನ ಕೇವಲ ಒಂದು ಸಾಧನವಲ್ಲ, ಅದೊಂದು ನುರಿತ ತಂಡದಂತೆ ಮಾರಾಟಗಾರರ ಜೊತೆ ಕೆಲಸ ಮಾಡುತ್ತದೆ. ಸರ್ಕಾರದ 'ಇಂಡಿಯಾ ಎಐ ಮಿಷನ್' ಧ್ಯೇಯಕ್ಕೆ ಅನುಗುಣವಾಗಿ, 2030ರ ವೇಳೆಗೆ 15 ಮಿಲಿಯನ್ ಸಣ್ಣ ವ್ಯಾಪಾರಗಳಿಗೆ ಎಐ ಸೌಲಭ್ಯ ಒದಗಿಸುವ ಗುರಿ ನಮ್ಮದಾಗಿದೆ." ಪ್ರಸ್ತುತ ಈ ತಂತ್ರಜ್ಞಾನವನ್ನು ಬಳಸುತ್ತಿರುವ ಮಾರಾಟಗಾರರು ತಮ್ಮ ದೈನಂದಿನ ಕಾರ್ಯಾಚರಣೆಯ ಶೇ. 70ರಷ್ಟು ಸಮಯವನ್ನು ಉಳಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರೈಮ್ ಡೇ 2026: ವ್ಯಾಪಾರಿಗಳಿಗೆ ತರಬೇತಿ
ಜುಲೈನಲ್ಲಿ ನಡೆಯಲಿರುವ 10ನೇ ಆವೃತ್ತಿಯ ಪ್ರೈಮ್ ಡೇಗೂ ಮುನ್ನ ವ್ಯಾಪಾರಿಗಳನ್ನು ಸಜ್ಜುಗೊಳಿಸಲು, ಅಮೆಜಾನ್ ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿ 'ಸೆಲ್ಲರ್ ಕನೆಕ್ಟ್ಸ್' (Seller Connects) ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ.
ಇಲ್ಲಿಯವರೆಗೆ 5,000ಕ್ಕೂ ಹೆಚ್ಚು ಮಾರಾಟಗಾರರು ಈ ಎಐ ಸಾಧನಗಳ ಬಳಕೆ, ಕ್ಯಾಟಲಾಗ್ ಆಪ್ಟಿಮೈಸೇಷನ್ ಮತ್ತು ಇನ್ವೆಂಟರಿ ಪ್ಲಾನಿಂಗ್ ಕುರಿತು ತರಬೇತಿ ಪಡೆದಿದ್ದಾರೆ. ಈ ತಂತ್ರಜ್ಞಾನದ ಬಳಕೆಯು ಅಂತಿಮವಾಗಿ ಕೋಟ್ಯಂತರ ಗ್ರಾಹಕರಿಗೆ ವೇಗದ ಮತ್ತು ವಿಶ್ವಾಸಾರ್ಹ ಶಾಪಿಂಗ್ ಅನುಭವವನ್ನು ನೀಡಲಿದೆ.

