ಒಂದು ದಿನ ಬೆಳಗ್ಗೆ ನಿದ್ದೆಯಿಂದ ಎದ್ದ ತತ್‌ಕ್ಷಣವೇ ಏನೋ ಕಿರಿಕಿರಿ ಉಂಟಾಯಿತು. ಅದರ ಜತೆಗೆ ಮನೆಯಲ್ಲಿ ಎಲ್ಲೆಡೆ ಓಡಾಡುತ್ತಿದ್ದ ಇರುವೆಗಳನ್ನು ನೋಡಿ ಇನ್ನಷ್ಟು ಬೇಸರವಾಯಿತು. ಅಷ್ಟರಲ್ಲಿ, 'ಎಲ್ಲಿ ನೋಡಿದರೂ ಇರುವೆಗಳೇ ಕಾಣುತ್ತಿವೆ!' ಎಂಬ ಅಮ್ಮನ ಮಾತು ಕಿವಿಗೆ ಬಿತ್ತು.
ನಾನು ನೇರವಾಗಿ ಅಡುಗೆಮನೆಗೆ ಹೋಗಿ ಅಲ್ಲಿ ಓಡಾಡುತ್ತಿದ್ದ ಇರುವೆಗಳನ್ನು ಗಮನಿಸುತ್ತ ಕುಳಿತೆ.
ಮೊದಲಿಗೆ ಅವು ಸಾಮಾನ್ಯ ಕೀಟಗಳಂತೆ ಕಂಡವು. ಆದರೆ ಸ್ವಲ್ಪ ಸಮಯ ಅವುಗಳ ಚಟುವಟಿಕೆಗಳನ್ನು ಗಮನಿಸಿದಾಗ ಆಶ್ಚರ್ಯವಾಯಿತು. ಪ್ರತಿಯೊಂದು ಇರುವೆಯೂ ತನ್ನ ಕೆಲಸದಲ್ಲಿ ನಿರತವಾಗಿತ್ತು. ಕೆಲವು ಆಹಾರವನ್ನು ಹೊತ್ತುಕೊಂಡು ಹೋಗುತ್ತಿದ್ದರೆ, ಇನ್ನೂ ಕೆಲವು ಆಹಾರವನ್ನು ಹುಡುಕುತ್ತಾ ಸಾಗುತ್ತಿದ್ದವು. ಅವುಗಳ ದಾರಿಯಲ್ಲಿ ನಾನು ಕೈಯನ್ನು ಅಡ್ಡಹಾಕಿ ತೊಂದರೆ ನೀಡಿದರೂ, ಅವು ಯಾವುದೇ ಗೊಂದಲಕ್ಕೊಳಗಾಗದೆ ಮತ್ತೂಂದು ದಾರಿಯನ್ನು ಹುಡುಕಿ ತಮ್ಮ ಕೆಲಸವನ್ನು ಮುಂದುವರಿಸಿದವು. ಈ ದೃಶ್ಯ ನನ್ನಲ್ಲಿ ಇರುವೆಗಳ ಬಗ್ಗೆ ಕುತೂಹಲವನ್ನು ಹುಟ್ಟಿಸಿತು.
ಇರುವೆ ಗಾತ್ರದಲ್ಲಿ ಚಿಕ್ಕದಾದ ಕೀಟವಾದರೂ ಅದರ ಜೀವನ ಕ್ರಮ ಅತ್ಯಂತ ಸಂಘಟಿತವಾಗಿದೆ. ಇರುವೆಗಳ ಸಮಾಜದಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ರಾಣಿ ಇರುವೆ ಸಂತಾನೋತ್ಪತ್ತಿಯ ಹೊಣೆಯನ್ನು ಹೊತ್ತಿರುತ್ತದೆ. ಕೆಲಸಗಾರ ಇರುವೆಗಳು ಆಹಾರ ಸಂಗ್ರಹಣೆ, ಗೂಡು ನಿರ್ಮಾಣ ಮತ್ತು ಮರಿಗಳ ಆರೈಕೆಯ ಕೆಲಸಗಳನ್ನು ನಿರ್ವಹಿಸುತ್ತವೆ. ಈ ರೀತಿ ಅವುಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಮಾನವ ಸಮಾಜಕ್ಕೂ ಮಾದರಿಯಾಗಿದೆ.
ಇರುವೆಗಳ ಮತ್ತೂಂದು ವಿಶೇಷ ಗುಣವೆಂದರೆ ಅವುಗಳ ಸಂವಹನ ಸಾಮರ್ಥ್ಯ. ಒಂದು ಇರುವೆಗೆ ಆಹಾರ ದೊರೆತರೆ ಅದು ತನ್ನ ದಾರಿಯಲ್ಲಿ ವಿಶೇಷ ರಾಸಾಯನಿಕ ಗುರುತು (ಫೆರೊಮೋನ್) ಬಿಡುತ್ತದೆ. ಉಳಿದ ಇರುವೆಗಳು ಆ ಗುರುತನ್ನು ಅನುಸರಿಸಿ ಆಹಾರದ ಸ್ಥಳವನ್ನು ತಲುಪುತ್ತವೆ. ಇದರಿಂದ ಕೆಲವೇ ಕ್ಷಣಗಳಲ್ಲಿ ಅನೇಕ ಇರುವೆಗಳು ಒಂದೇ ಸ್ಥಳದಲ್ಲಿ ಸೇರುವುದನ್ನು ನಾವು ಕಾಣಬಹುದು. ಈ ವಿಧಾನವು ಅವುಗಳ ಸಂಘಟನಾ ಶಕ್ತಿಯನ್ನು ಮತ್ತು ಬುದ್ಧಿವಂತಿಕೆಯನ್ನು ತೋರಿಸುತ್ತದೆ.
ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಇರುವೆಗಳ ಪಾತ್ರವೂ ಮಹತ್ವದ್ದಾಗಿದೆ. ಅವು ನೆಲದೊಳಗೆ ಆಳವಾದ ಗೂಡುಗಳನ್ನು ನಿರ್ಮಿಸುವುದರಿಂದ ಮಣ್ಣು ಸಡಿಲವಾಗುತ್ತದೆ. ಇದರಿಂದ ಮಳೆನೀರು ಭೂಮಿಯೊಳಗೆ ಸುಲಭವಾಗಿ ಇಳಿದು ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಜತೆಗೆ ಅವು ಸತ್ತ ಕೀಟಗಳು ಮತ್ತು ಸಾವಯವ ವಸ್ತುಗಳನ್ನು ವಿಭಜಿಸುವ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ಸಹ ನೆರವಾಗುತ್ತವೆ. ಆದ್ದರಿಂದ ಇರುವೆಗಳು ಕೇವಲ ಸಣ್ಣ ಕೀಟಗಳಲ್ಲ, ಪರಿಸರ ವ್ಯವಸ್ಥೆಯ ಪ್ರಮುಖ ಅಂಗಗಳಾಗಿವೆ.
ವಿಶ್ವದಲ್ಲಿ ಸುಮಾರು 12,000ಕ್ಕೂ ಹೆಚ್ಚು ಜಾತಿಯ ಇರುವೆಗಳು ಕಂಡುಬಂದಿವೆ. ಕಪ್ಪು ಇರುವೆ, ಕೆಂಪು ಇರುವೆ ಮತ್ತು ಚಗಳಿ ಇರುವೆಗಳು ಸಾಮಾನ್ಯವಾಗಿ ಕಂಡುಬರುವ ಜಾತಿಗಳಾಗಿವೆ. ವಿಶೇಷವಾಗಿ ಚಗಳಿ ಇರುವೆಗಳು ಅತ್ಯಂತ ಜಾಗರೂಕ ಮತ್ತು ಹೋರಾಟದ ಸ್ವಭಾವ ಹೊಂದಿರುತ್ತವೆ. ತಮ್ಮ ಗೂಡಿಗೆ ಅಪಾಯ ಉಂಟಾದರೆ ಅವು ಒಗ್ಗಟ್ಟಿನಿಂದ ಎದುರಾಳಿಯ ಮೇಲೆ ದಾಳಿ ಮಾಡುತ್ತವೆ. ಇದು ಅವುಗಳ ಏಕತೆ ಮತ್ತು ಧೈರ್ಯವನ್ನು ತೋರಿಸುತ್ತದೆ.
ಇರುವೆಗಳ ಜೀವನ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಅವು ಎಂದಿಗೂ ಸೋಮಾರಿತನ ತೋರಿಸುವುದಿಲ್ಲ; ನಿರಂತರವಾಗಿ ದುಡಿಯುತ್ತವೆ. ಎಷ್ಟೇ ಅಡೆತಡೆಗಳು ಬಂದರೂ ಗುರಿಯನ್ನು ಸಾಧಿ ಸುವವರೆಗೆ ಪ್ರಯತ್ನವನ್ನು ಬಿಡುವುದಿಲ್ಲ. ಒಗ್ಗಟ್ಟು, ಪರಿಶ್ರಮ, ಶಿಸ್ತು, ಸಮಯಪ್ರಜ್ಞೆ ಮತ್ತು ತಾಳ್ಮೆ ಎಂಬ ಮೌಲ್ಯಗಳು ಅವುಗಳ ಜೀವನದಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಈ ಗುಣಗಳನ್ನು ಮಾನವರು ಅಳವಡಿಸಿಕೊಂಡರೆ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
-ಅನಿತಾ ಹೂಗಾರ್
ಮಂಗಳೂರು ವಿ.ವಿ.

