ಉಡುಪಿ: ಧಾರ್ಮಿಕ ಚಟುವಟಿಕೆಗಳ ಕೇಂದ್ರ ಹಾಗೂ ಪೊಡವಿಗೊಡೆಯನ ಬೀಡು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದ ಸಂಭ್ರಮ ಮನೆಮಾಡುತ್ತಿದೆ. ಸೆ. 4 ಮತ್ತು 5ರಂದು ನಡೆಯಲಿರುವ ಈ ಉತ್ಸವಕ್ಕಾಗಿ ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಪೂರ್ವತಯಾರಿಗಳು ಭರದಿಂದ ಸಾಗುತ್ತಿವೆ.
ದೇವರ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸುವ ಸಾವಿರಾರು ಭಕ್ತರನ್ನು ಸ್ವಾಗತಿಸಲು ಇಡೀ ರಥಬೀದಿ ಬೀದಿಯೇ ಸಿಂಗಾರಗೊಳ್ಳುತ್ತಿದೆ. ವಿಟ್ಲಪಿಂಡಿ ಸಂಭ್ರಮದ ಮುಖ್ಯ ಆಕರ್ಷಣೆಯಾದ "ಮೊಸರು ಕುಡಿಕೆ ಉತ್ಸವ'ಕ್ಕಾಗಿ ಬೃಹತ್ ಕಂಬಗಳನ್ನು ನೆಡಲಾಗುತ್ತಿದೆ. ಭಕ್ತರಿಗೆ ಪ್ರಸಾದ ವಿತರಣೆಗೆ ಎರಡು ಮಂಟಪ ಸಿದ್ಧಗೊಂಡಿದೆ. ಮಲ್ಲಯುದ್ಧ ಪ್ರದರ್ಶನಕ್ಕಾಗಿ ಶೀರೂರು ಮಠದ ಆವರಣದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಶ್ರೀಕೃಷ್ಣ ಮಠದ ಎದುರಿನ ಪ್ರವೇಶ ದ್ವಾರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ.
ಧಾರ್ಮಿಕ ವಿಧಿ
ಸೆ. 4ರಂದು ರಾತ್ರಿ ಕೃಷ್ಣನಿಗೆ ವಿಶೇಷ ಪೂಜೆ ಹಾಗೂ ಅರ್ಘ್ಯ ಪ್ರದಾನ, ಉಂಡೆ, ಚಕ್ಕುಲಿ, ಲಡ್ಡು ಸಮರ್ಪಣೆ, ಸೆ. 5ರಂದು ಅಪರಾಹ್ನ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾದ ವೈಭವದ "ವಿಟ್ಲಪಿಂಡಿ' (ಶ್ರೀಕೃಷ್ಣ ಲೀಲೋತ್ಸವ).
ಕರಾವಳಿಯ ಕಲಾ ವೈಭವ: ಹುಲಿವೇಷದ ಅಬ್ಬರ
ಅಷ್ಟಮಿ ಉತ್ಸವಕ್ಕೆ ಮೆರುಗು ನೀಡಲಿರುವುದು ಕರಾವಳಿಯ ಸಾಂಪ್ರದಾಯಿಕ ಹುಲಿವೇಷ ಮತ್ತು ವಿವಿಧ ವೇಷಭೂಷಣಗಳು. ನೂರಾರು ಹುಲಿವೇಷ ತಂಡಗಳು ಈಗಾಗಲೇ ತಾಲೀಮು ಆರಂಭಿಸಿದ್ದು, ರಥಬೀದಿಯಲ್ಲಿ ಹೆಜ್ಜೆ ಹಾಕಲು ಕಾಯುತ್ತಿವೆ.
ವಿಟ್ಲಪಿಂಡಿ ವೈಭವ: 13 ಗುರ್ಜಿ, 2 ಮಂಟಪ ಸ್ಥಾಪನೆ
ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವದ ಸಂದರ್ಭ ಮೊಸರು ಕುಡಿಕೆ ಒಡೆಯಲು ಒಟ್ಟು 13 ಜತೆ ಗುರ್ಜಿ (ಕಂಬ)ಗಳನ್ನು ಸ್ಥಾಪಿಸಲಾಗುತ್ತಿದೆ. ಕೃಷ್ಣ ಮಠ, ಪರ್ಯಾಯ ಶೀರೂರು ಮಠ ವತಿಯಿಂದ 7 ಜತೆ ಗುರ್ಜಿಗಳನ್ನು, ಭಕ್ತರಿಗೆ ಉಂಡೆ, ಚಕ್ಕುಲಿ, ಬಾಳೆಹಣ್ಣು ಬೀರಲು ಮರದಿಂದ 2 ಮಂಟಪಗಳನ್ನು ನಿರ್ಮಿಸಲಾಗಿದೆ. ಒಂದು ಕನಕ ಗೋಪುರ ಎದುರು, ಇನ್ನೊಂದು ರಥೋತ್ಸವದ ಸಂದರ್ಭ ರಥ ನಿಲ್ಲುವ ಪ್ರದೇಶದಲ್ಲಿವೆ. ಉಳಿದ 6 ಜತೆ ಗುರ್ಜಿಗಳನ್ನು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ್ದು, ಅವುಗಳ ಅಳವಡಿಕೆ ಶ್ರೀ ಕೃಷ್ಣ ಮಠದ ವತಿಯಿಂದಲೇ ನಡೆಯುತ್ತದೆ.
ವಿಟ್ಲಪಿಂಡಿ ಉತ್ಸವದಲ್ಲಿ ಎರಡು ರಥೋತ್ಸವ
ವಿಟ್ಲಪಿಂಡಿ ಉತ್ಸವದಲ್ಲಿ ಒಟ್ಟು ಎರಡು ರಥೋತ್ಸವ ನಡೆಯಲಿದೆ. ಒಂದು ಚಿನ್ನದ ರಥದಲ್ಲಿ ಅಷ್ಟಮಿ ಅಂಗವಾಗಿ ಸ್ಥಾಪಿಸಿದ ಶ್ರೀಕೃಷ್ಣದ ಮೃಣ್ಮಯ ಮೂರ್ತಿಯನ್ನು ಹಾಗೂ ಇನ್ನೊಂದು ಚಂದ್ರಮಂಡಲ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ವಿಗ್ರಹ ಇರಿಸಿ ಉತ್ಸವ ನಡೆಯಲಿದೆ.
45 ಮಡಕೆ ಬಳಕೆ
ಒಂದು ಗುರ್ಜಿಯಲ್ಲಿ 3 ಮಡಕೆಯಂತೆ ಒಟ್ಟು 45 ಮಡಕೆಗಳನ್ನು ಬಳಸಲಾಗುತ್ತಿದೆ. ಮಡಕೆಯಲ್ಲಿ ಮೊಸರು, ಅರಳು, ಅರಶಿನ ಇತ್ಯಾದಿಗಳನ್ನು ಹಾಕಲಾಗುತ್ತದೆ. ಮಠದ ಮೇಸ್ತ್ರಿ ಅವರು ರಾಟೆಯ ಮೂಲಕ ಮಡಕೆಯನ್ನು ಇಳಿಸುತ್ತಾರೆ. ಗೊಲ್ಲರು ಅದನ್ನು ಬಿದಿರ ಕೋಲಿನಿಂದ ಒಡೆಯುತ್ತಾರೆ. ಗೊಲ್ಲರಿಗೆ ಮುಖವರ್ಣಿಕೆ ಮಾಡಿ, ಮುಂಡಾಸು, ಹಳದಿ ಪಂಚೆ, ನೀಲಿ ಬನಿಯನ್, ಹಳದಿ ರಿಬ್ಬನ್ ತಲೆಗೆ ಕಟ್ಟಿ, ಬೈಹುಲ್ಲಿನಿಂದ ಮಾಡಿದ ಪೇಟ, ಡೋಲು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಕುಣಿತದೊಂದಿಗೆ ಮಡಕೆಗೆ ಸುತ್ತ ಬಂದು ಮಡಕೆ ಒಡೆಯುತ್ತಾರೆ ಎಂದು ಪರ್ಯಾಯ ಮಠ ಶೀರೂರು ಮಠದ ದಿವಾನರಾದ ಡಾ| ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಈ ಬಾರಿ "ಮರ್ಮೇನ್' ವೇಷದಲ್ಲಿ ರವಿ ಕಟಪಾಡಿ
ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗುವ ಉದ್ದೇಶ
ಉಡುಪಿ: ಸುಮಾರು 14 ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಭಿನ್ನ ವೇಷಗಳ ಮೂಲಕ ಗಮನ ಸೆಳೆಯುತ್ತಿರುವ ರವಿ ಕಟಪಾಡಿ ತಾನು ಈ ಬಾರಿ ಸಮುದ್ರ ಜೀವಿ "ಮರ್ಮೇನ್' ಎನ್ನುವ ಮತ್ಸ್ಯಪುರುಷನ ವೇಷವನ್ನು ಧರಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇಷ ಹಾಕಿ ಉಡುಪಿ, ಕಟಪಾಡಿ, ಮಲ್ಪೆ, ಬ್ರಹ್ಮಾವರ ಪರಿಸರದಲ್ಲಿ ಸಂಚರಿಸಲಿದ್ದು, ಈ ಬಾರಿ ಕ್ಯಾನ್ಸರ್ ಸಹಿತ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ 15 ಲಕ್ಷ ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡಿದ್ದೇನೆ. ಇದರಿಂದ ಒಟ್ಟು 2 ಕೋಟಿ ರೂ. ಹಣ ಸಂಗ್ರಹಿಸಿ ವಿತರಿಸಿದಂತಾಗುವುದು ಎಂದರು.
14 ವರ್ಷಗಳಿಂದ ವೇಷ ಹಾಕುತ್ತಿದ್ದರೂ ಹಣ ಸಂಗ್ರಹಿಸಿ ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ನೀಡುವ ಕಾರ್ಯ 10 ವರ್ಷಗಳ ಕಾಲ ಮಾತ್ರ ಮಾಡಿದ್ದೇನೆ. ಈ ವೇಳೆ ಒಟ್ಟು 1.85 ಕೋಟಿ ರೂ. ಸಂಗ್ರಹಿಸಿದ್ದು, 204 ಮಂದಿಗೆ ಹಸ್ತಾಂತರಿಸಲಾಗಿದೆ. ಉಳಿದ ವರ್ಷಗಳಲ್ಲಿ ರೋಡ್ ಶೋ ಮಾತ್ರ ಮಾಡಿದ್ದೇನೆ. ಕಳೆದ ವರ್ಷ ನನಗೆ ಅನಾರೋಗ್ಯವಿದ್ದ ಕಾರಣ ವೇಷಧರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ 15ನೇ ವರ್ಷದ ವೇಷ ಧರಿಸಿ ಸಂಚಾರ ನಡೆಸಲಾಗುವುದು. ಸೆ. 3ರಂದು ಬೆಳಗ್ಗೆ 9ಕ್ಕೆ ಮುಖವರ್ಣಿಕೆ ಆರಂಭಿಸಲಿದ್ದು, ಸೆ. 4ರಂದು ಬೆಳಗ್ಗಿನಿಂದ ಸಂಚಾರ ಆರಂಭಿಸಲಿದ್ದೇನೆ ಮತ್ತು 5ರಂದು ಸಂಜೆಯ ವರೆಗೆ ನಡೆಯಲಿದೆ ಎಂದರು.
ಈ ಬಾರಿಯ ವೇಷ ಕೊನೆಯದಾಗಿರಲಿದ್ದು, ಮುಂದಿನ ವರ್ಷದಿಂದ ಅಷ್ಟಮಿಗೆ ವೇಷ ಹಾಕುವುದಿಲ್ಲ. ವೇಷ ಧರಿಸಲು ರಾಸಾಯನಿಕಗಳನ್ನು ಬಳಸುವ ಕಾರಣ ಅದು ನನ್ನ ದೇಹದ ಮೇಲೆ ಪರಿಣಾಮ ಬೀರುತ್ತಿದ್ದು, ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ವೇಷ ಧರಿಸದಿದ್ದರೂ ಅನಾರೋಗ್ಯ ಪೀಡಿತ ಮಕ್ಕಳಿಗೆ ನನ್ನಿಂದಾದಷ್ಟು ನೆರವಾಗುವ ಕಾರ್ಯ ಮುಂದುವರಿಸಲಿದ್ದೇನೆ ಎಂದರು.
ರವಿ ಫ್ರೆಂಡ್ಸ್ ಕಟಪಾಡಿ ತಂಡದ ಮಾರ್ಗದರ್ಶಕ ಕೆ. ಮಹೇಶ್ ಶೆಣೈ, ಹರ್ಷ, ಶ್ರವಣ್, ಆಶಿಕ್ ಮೊದಲಾದವರಿದ್ದರು.

