ಗುವಾಹಟಿ: "ಅಸ್ಸಾಂಗೆ ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿ ಪ್ರಜೆಗಳಿಗೆ ಮತದಾನದ ಹಕ್ಕು ನೀಡುವುದು ರಾಷ್ಟ್ರದ ಹಿತದೃಷ್ಟಿಯಿಂದ ಸರಿಯಲ್ಲ" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಪ್ರತಿಪಾದಿಸಿದ್ದಾರೆ.
ಅಕ್ರಮ ವಲಸಿಗರ ವಿರುದ್ಧದ ಕ್ರಮವನ್ನು ಮುಸ್ಲಿಂ ಸಮುದಾಯಕ್ಕೆ ಜೋಡಿಸಬಾರದು ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಸುದ್ದಿಸಂಸ್ಥೆ 'ಎಎನ್‌ಐ' ಜೊತೆ ಮಾತನಾಡಿದ ಅವರು, ಈ ಸೂಕ್ಷ್ಮ ವಿಚಾರದಲ್ಲಿ ವಿರೋಧ ಪಕ್ಷಗಳು 'ವೋಟ್ ಬ್ಯಾಂಕ್' ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದರು. ವಿಶ್ವದ ಯಾವುದೇ ದೇಶದಲ್ಲೂ ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ಯಾವುದೇ ಧರ್ಮಕ್ಕೆ ತಳುಕು ಹಾಕುವುದು ಸರಿಯಲ್ಲ. ನಾವು ಅಸ್ಸಾಂನಲ್ಲಿ ವಾಸಿಸುತ್ತಿರುವ ಮುಸ್ಲಿಮರ ವಿರೋಧಿಯಲ್ಲ. ಆದರೆ, ವಿದೇಶಿ ಪ್ರಜೆಗಳಿಗೆ ಇಲ್ಲಿನ ಮತದಾನದ ಹಕ್ಕು ನೀಡುವುದು ದೇಶದ ಸುರಕ್ಷತೆಗೆ ಧಕ್ಕೆಯಾದಂತೆ," ಎಂದು ಅವರು ಹೇಳಿದರು.
ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಕೋಮುವಾದದ ಬಣ್ಣ ಹಚ್ಚಿ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದರು.
ಅಭಿವೃದ್ಧಿಯೇ ಶ್ರೀರಕ್ಷೆ: 2014ರ ನಂತರ ಈಶಾನ್ಯ ಭಾರತದಲ್ಲಿ ನಡೆದಿರುವ ಮೂಲಸೌಕರ್ಯ ಕ್ರಾಂತಿಯನ್ನು ಉಲ್ಲೇಖಿಸಿದ ಅವರು, "ಬ್ರಹ್ಮಪುತ್ರ ನದಿಗೆ ನಿರ್ಮಿಸಲಾದ 11-12 ಸೇತುವೆಗಳು, ಹೊಸ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ಸಂಪರ್ಕವನ್ನು ಜನರು ಗಮನಿಸಿದ್ದಾರೆ. ಮೋದಿ ಸರ್ಕಾರದ ಈ ಅಭಿವೃದ್ಧಿ ಕಾರ್ಯಗಳೇ ನಮಗೆ ಮತ್ತೆ ದೊಡ್ಡ ಬಹುಮತ ತಂದುಕೊಡಲಿವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಈಗಾಗಲೇ ಅಕ್ರಮ ನುಸುಳುವಿಕೆಯಿಂದ ರಾಜ್ಯದ ಜನಸಂಖ್ಯಾ ಸ್ವರೂಪ ಬದಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಇದನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಏ.9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.

