ನವದೆಹಲಿ: ಖ್ಯಾತ ಗಾಯಕರಾದ ಹನಿ ಸಿಂಗ್ ಮತ್ತು ಬಾದ್‌ಶಾ ಅವರ ಹಾಡು 'ವಾಲ್ಯೂಮ್ 1' (Volume 1) ಹಾಡನ್ನು ಎಲ್ಲಾ ಸಾಮಾಜಿಕ ವೇದಿಕೆಗಳಿಂದ ತೆಗೆದು ಹಾಕಬೇಕೆಂದು ದೆಹಲಿ ಹೈಕೋರ್ಟ್ ಗುರುವಾರ (ಏ.2) ಆದೇಶಿಸಿದೆ.
ಈ ಹಾಡು "ಅತ್ಯಂತ ಅಶ್ಲೀಲ" ಎಂದು ಬಣ್ಣಿಸಿರುವ ನ್ಯಾಯಾಲಯ, ಕೂಡಲೇ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ಇದನ್ನು ತೆಗೆದುಹಾಕುವಂತೆ ಆದೇಶಿಸಿದೆ.
ಈ ಹಾಡಿನ ಕುರಿತು ಹಿಂದೂ ಶಕ್ತಿ ದಳ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕೌರವ್ ಅವರ ಪೀಠವು ನ್ಯಾಯಾಂಗದ "ನ್ಯಾಯಾಲಯದ ಆತ್ಮಸಾಕ್ಷಿಯು ಸಂಪೂರ್ಣವಾಗಿ ಆಘಾತಕ್ಕೊಳಗಾದ ಅಪರೂಪದ ಪ್ರಕರಣಗಳಲ್ಲಿ ಇದು ಒಂದು" ಎಂದು ಕೋರ್ಟ್ ಹೇಳಿದೆ.
ಹಾಡಿನ ಸಾಹಿತ್ಯವು ಮಹಿಳೆಯರ ಬಗ್ಗೆ ಅತ್ಯಂತ ಅಸಭ್ಯ, ಅವಹೇಳನಕಾರಿ ಮತ್ತು ಅಶ್ಲೀಲವಾಗಿ ಚಿತ್ರೀರಿಸಿದೆ. ಇದು ಮಹಿಳೆಯರನ್ನು ಕೇವಲ ಲೈಂಗಿಕ ತೃಪ್ತಿಯ ವಸ್ತುವನ್ನಾಗಿ ಬಿಂಬಿಸುತ್ತದೆ. ಕಲಾತ್ಮಕ ಅಭಿವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಅಮಾನವೀಯ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡಲು ಸಾಧ್ಯವಿಲ್ಲ. ಇದು ನಾಗರಿಕ ಸಮಾಜಕ್ಕೆ ಒಪ್ಪುವಂತದ್ದಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಹನಿ ಸಿಂಗ್, ಬಾದ್‌ಶಾ ಮತ್ತು ಈ ಹಾಡಿನ ಹಕ್ಕು ಹೊಂದಿರುವವರು ಎಲ್ಲಾ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು ಮತ್ತು ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಿಂದ ಹಾಡನ್ನು ಡಿಲೀಟ್ ಮಾಡಬೇಕು ಎಂದಿದೆ. ಇದಲ್ಲದೆ ಹನಿ ಸಿಂಗ್ ಮತ್ತು ಬಾದ್‌ಶಾ ಇಬ್ಬರಿಗೂ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಹಾಡಿನ ಎಲ್ಲಾ ಯುಆರ್‌ಎಲ್ (URL) ಗಳನ್ನು ತಕ್ಷಣವೇ ಬ್ಲಾಕ್ ಮಾಡಲು ಸೂಚಿಸಿದೆ.
ಈ ಹಾಡಿನ ರೀಮಿಕ್ಸ್ ಆವೃತ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ. ಅದರ ಆಧಾರದ ಮೇಲೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ನೋಟಿಸ್ ನೀಡಲು ಸರ್ಕಾರಕ್ಕೆ ತಿಳಿಸಲಾಗಿದೆ.
ಗೂಗಲ್ ಸೇರಿದಂತೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳಿಗೆ ನೇರವಾಗಿ ದೂರು ನೀಡಲು ಅರ್ಜಿದಾರರಿಗೆ ನ್ಯಾಯಾಲಯ ಅನುಮತಿ ನೀಡಿದೆ.
'ವಾಲ್ಯೂಮ್ 1' ಹಾಡನ್ನು ಯಾರು ಹಾಡಿದ್ದಾರೆ ಎಂಬ ಬಗ್ಗೆ ಬಹಳ ದಿನಗಳಿಂದ ವಿವಾದವಿತ್ತು. ಆದರೆ ಇತ್ತೀಚಿನ ಕನ್ಸರ್ಟ್ ಒಂದರಲ್ಲಿ ಹನಿ ಸಿಂಗ್ ಈ ಹಾಡಿನ ಕೆಲವು ಸಾಲುಗಳನ್ನು ಹಾಡಿದ್ದರಿಂದ, ಅರ್ಜಿದಾರರು ಇದು ಹನಿ ಸಿಂಗ್ ಅವರದ್ದೇ ಎಂದು ವಾದಿಸಿದ್ದರು. ಈ ವಿವಾದಾತ್ಮಕ ಸಾಹಿತ್ಯವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಿಂದೂ ಶಕ್ತಿ ದಳ ನ್ಯಾಯಾಲಯದ ಮೊರೆ ಹೋಗಿತ್ತು.
ಈ ಪ್ರಕರಣದ ಮುಂದಿನ ವಿಚಾರಣೆಯು ಮೇ 7, 2026 ರಂದು ನಡೆಯಲಿದೆ.
ಇತ್ತೀಚೆಗೆ ಬಾದ್ ಶಾ ಅವರ 'ಟಟೀರಿ' ಕೂಡ ವಿವಾದಕ್ಕೆ ಸಿಲುಕಿತ್ತು. ವಿವಾದದ ಬಳಿಕ ಬಾದ್ ಶಾ ಕ್ಷಮೆ ಕೋರಿ, ಹಾಡನ್ನು ಡಿಲೀಟ್ ಮಾಡಿದ್ದರು. ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

