ಅಯೋಧ್ಯೆ: ದೇಣಿಗೆ ಹಣ ಅಕ್ರಮ ಬೆಳಕಿಗೆ ಬಂದ ನಂತರ ರಾಮಮಂದಿರ ದೇಗುಲಕ್ಕೆ ಬಂದ ಕಾಣಿಕೆಗಳನ್ನು ಎಣಿಸುವ ಕ್ರಮದಲ್ಲಿ ಗಣನೀಯ ಬದಲಾವಣೆ ಮಾಡಲಾಗಿದ್ದು, ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮೊದಲಿದ್ದಂತೆ ಮೇಜು, ಕುರ್ಚಿಗಳ ವ್ಯವಸ್ಧೆಯಲ್ಲಿ ಎಣಿಸುವ ಪದ್ಧತಿ ಕೈಬಿಟ್ಟು, ಪ್ಲೈವುಡ್ ಹಾಸು ಹಾಸಲಾಗಿರುವ ವಿಶಾಲ ಕೋಣೆಯಲ್ಲಿ ನೆಲದ ಮೇಲೆ ಕುಳಿತೇ ದೇಣಿಗೆ ಹಣ ಎಣಿಸುವ ಪದ್ಧತಿ ಜಾರಿ ಮಾಡಲಾಗಿದೆ.
ಎಣಿಕೆ ಕೋಣೆಯಲ್ಲಿ ಒಂದು ಇಂಚು ಜಾಗವೂ ಪರಿವೀಕ್ಷಣೆಯಿಂದ ಹೊರಗುಳಿಯಲು ಸಾಧ್ಯವಿರದಂತೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಎಣಿಕೆಗೆ ಕುಳಿತವರು ಪರಸ್ಪರ ಮಾತನಾಡುವಂತಿಲ್ಲ, ಕ್ಯಾಂಟೀನ್‌ನಲ್ಲಿ ಹೆಚ್ಚು ಹೊತ್ತು ಇರುವ ಹಾಗಿಲ್ಲ. ಎಣಿಕೆ ಮಧ್ಯೆ ಪದೇ ಪದೇ ಶೌಚಕ್ಕೆ ಅಥವಾ ಇನ್ನಿತರ ಕಾರಣಕ್ಕೆ ಹೊರಹೋಗುವವರನ್ನು ತಪಾಸಣೆ ನಡೆಸಲಾಗುತ್ತದೆ. ಸಿಸಿಟಿವಿ ಕಣ್ಗಾವಲು ಕೊಠಡಿ ಸಿಬ್ಬಂದಿ ತಮ್ಮ ಕುರ್ಚಿ ಬಿಟ್ಟು ಕದಲುವಂತಿಲ್ಲ.
ನಿಯಮಾವಳಿಗಳ ಕೈಪಿಡಿಯೇಕಿಲ್ಲ?
ಇದೇ ವೇಳೆ, ರಾಮಮಂದಿರದಲ್ಲಿ ಅರ್ಚಕರ ನೇಮಕಾತಿಗೆ ಮಾತ್ರ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಅವರಿಗೆ ನೀಡುವ ವೇತನಗಳ ಲೆಕ್ಕ ಇಡಲು ನಿಯಮಾವಳಿಗಳ ಕೈಪಿಡಿಗಳನ್ನು ರೂಪಿಸಲಾಗಿದೆ. ಆದರೆ, ದೇಗುಲದ ಸಿಬ್ಬಂದಿ ಹೆಸರಿನಲ್ಲಿ 1,500 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು ಅದಕ್ಕೆ ಯಾವುದೇ ನಿಯಮಗಳಿರುವ ಕೈಪಿಡಿ ಇಟ್ಟಿಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
5 ಕೋಟಿ ರೂ. ಮೌಲ್ಯದ ಚಿನ್ನದ ಗ್ರಂಥ ನಾಪತ್ತೆ?
ರಾಮಮಂದಿರಕ್ಕೆ ತಾವು ನೀಡಿದ್ದ ರಾಮಚರಿತಮಾನಸದ ವಾಕ್ಯಗಳುಳ್ಳ 5 ಕೋಟಿ ರೂ. ಮೌಲ್ಯದ ಚಿನ್ನದ ಪುಟಗಳ ಪುಸ್ತಕ ಮಂದಿರದಿಂದ ಮಾಯವಾಗಿದ್ದಕ್ಕೆ ಕೇಂದ್ರ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣ್ ಬೇಸರ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಆ ಗ್ರಂಥವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಆನಂತರ ಅದನ್ನು ಅಲ್ಲಿಂದ ತೆರವು ಮಾಡಲಾಯಿತು. ಈ ಬಗ್ಗೆ ಕಾರಣ ಕೇಳಿದ್ದರೂ ಟ್ರಸ್ಟ್‌ನಿಂದ ಉತ್ತರ ಬಂದಿಲ್ಲ. ಅಲ್ಲದೆ, 'ರಾಮಮಂದಿರ ನಿರ್ಮಾಣಕ್ಕೆ ಕನ್ಯಾಕುಮಾರಿಯಿಂದ ಬಂದ ಮೊಟ್ಟಮೊದಲ ಇಟ್ಟಿಗೆ ನಮ್ಮ ಮಾವನವರು ಕೊಟ್ಟಿದ್ದು. ನಮ್ಮಿಡೀ ಕುಟುಂಬ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿತ್ತು ಎಂದಿದ್ದಾರೆ.
ಇಂದು ದೇಗುಲ ಟ್ರಸ್ಟ್‌ನ ಮಹತ್ವದ ಸಭೆ
ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹತ್ವದ ಸಭೆ ಸೋಮವಾರ ನಡೆಯಲಿದೆ. ಸಭೆಯಲ್ಲಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ಅಂಗೀಕಾರ, ಟ್ರಸ್ಟ್‌ನ 5 ವರ್ಷಗಳ ಹಣಕಾಸು ವ್ಯವಹಾರಗಳ ಮರು ಆಡಿಟಿಂಗ್, ಹುಂಡಿಗಳ ಮೇಲ್ವಿಚಾರಣೆ, ಚಿನ್ನ ಬೆಳ್ಳಿ ನಗದು ದೇಣಿಗೆ ನಿರ್ವಹಣೆಗೆ ಕಠಿಣ ನಿಯಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹೊಸಬಾಳೆ ಹೇಳಿಕೆಯೇ ನನ್ನ ಪ್ರತಿಕ್ರಿಯೆ: ಮೋಹನ್ ಭಾಗವತ್
ರಾಮಮಂದಿರ ದೇಣಿಗೆ ಅಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ನೀಡಿರುವ ಪ್ರತಿಕ್ರಿಯೆಯೇ ನನ್ನ ಪ್ರತಿಕ್ರಿಯೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ದೇಣಿಗೆ ಅಕ್ರಮ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹೊಸಬಾಳೆ ಆಗ್ರಹಿಸಿದ್ದರು.

