Dailyhunt Logo
  • Light mode
    Follow system
    Dark mode
    • Play Story
    • App Story
ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ: ಮೌನ ಮುರಿದ ಆರ್‌ಎಸ್‌ಎಸ್

ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ: ಮೌನ ಮುರಿದ ಆರ್‌ಎಸ್‌ಎಸ್

ವದೆಹಲಿ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಮತ್ತು ಕಳವು ಆರೋಪದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೌನ ಮುರಿದಿದ್ದು,''ಘಟನೆ ತೀವ್ರ ನೋವುಂಟು ಮಾಡಿದೆ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ದೇವಾಲಯದ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಗತ್ಯವಿದೆ'' ಎಂದು ಒತ್ತಾಯಿಸಿದೆ.

ಈ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರವು ಹಲವು ತಲೆಮಾರುಗಳ ಭಕ್ತರ ತ್ಯಾಗ, ಸಮರ್ಪಣೆ ಮತ್ತು ಹೋರಾಟದ ಫಲವಾಗಿ ಹಿಂದೂ ಸಮಾಜದ ನಂಬಿಕೆ ಹಾಗೂ ಭಕ್ತಿಯ ಪ್ರತೀಕವಾಗಿ ರೂಪುಗೊಂಡಿದೆ ಎಂದು ಹೇಳಿದ್ದಾರೆ.

ದೇಣಿಗೆ ಹಣ ದುರ್ಬಳಕೆಯ ಆರೋಪವು ದೇಶಾದ್ಯಂತ ಇರುವ ರಾಮಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಅದರ ಶಿಫಾರಸಿನ ಆಧಾರದ ಮೇಲೆ ಕಾನೂನು ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಹೊಸಬಾಳೆ ತಿಳಿಸಿದ್ದಾರೆ.

ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರು ಯಾರು ಎಂಬುದು ಸಾಬೀತಾದಲ್ಲಿ ಅವರ ವಿರುದ್ಧ ಕಠಿನ ಶಿಕ್ಷೆ ವಿಧಿಸಬೇಕು. ಜತೆಗೆ, ಈ ಘಟನೆಯನ್ನು ಅಸಾಧಾರಣ ಪ್ರಕರಣವೆಂದು ಪರಿಗಣಿಸಿ ದೇವಾಲಯದ ಆಡಳಿತ ಮತ್ತು ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿರುವ ಯಾವುದೇ ಲೋಪದೋಷಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸರಿಪಡಿಸಬೇಕು ಎಂದು ಸೂಚಿಸಿದ್ದಾರೆ.

ಅಯೋಧ್ಯೆ ರಾಮಮಂದಿರದ ಬಗ್ಗೆ ಕೋಟ್ಯಂತರ ಭಕ್ತರು ಹೊಂದಿರುವ ನಂಬಿಕೆ ಮತ್ತು ವಿಶ್ವಾಸ ಅಚಲವಾಗಿರಬೇಕು ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಉಂಟಾಗಿರುವ ಅನಿಶ್ಚಿತತೆ ಮತ್ತು ಗೊಂದಲಕ್ಕೆ ಅಂತ್ಯ ಹಾಡಬೇಕು ಎಂದು ಹೇಳಿದ್ದಾರೆ.

ಉತ್ತಮ ಹಣಕಾಸು ನಿರ್ವಹಣೆ, ಪಾರದರ್ಶಕ ಆಡಳಿತ ವ್ಯವಸ್ಥೆ ಮತ್ತು ಸಮರ್ಥ ಕಾರ್ಯನಿರ್ವಹಣಾ ಕ್ರಮಗಳ ಮೂಲಕ ಟ್ರಸ್ಟ್ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೊಸಬಾಳೆ ಹೇಳಿದ್ದಾರೆ.

ಇದೇ ವೇಳೆ, ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡವು ಪ್ರಕರಣದ ಕುರಿತು ನ್ಯಾಯಸಮ್ಮತ, ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani