ಸೆಪ್ಟಂಬರ್ ತಿಂಗಳನ್ನು ಜಾಗತಿಕವಾಗಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು, ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ಬೆಂಬಲ ನೀಡಲು, ಕ್ಯಾನ್ಸರ್ ಗೆದ್ದು ಬಂದವರನ್ನು ಗೌರವಿಸಲು ಮತ್ತು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡ ಮಕ್ಕಳನ್ನು ಸ್ಮರಿಸಲು ಈ ತಿಂಗಳು ಮೀಸಲಾಗಿದೆ.
ಚಿನ್ನದ ಬಣ್ಣದ ರಿಬ್ಬನ್ ಬಾಲ್ಯದ ಕ್ಯಾನ್ಸರ್ ಜಾಗೃತಿಯ ಜಾಗತಿಕ ಸಂಕೇತವಾಗಿದೆ. ಚಿನ್ನವು ಅತ್ಯಂತ ಅಮೂಲ್ಯವಾದದ್ದನ್ನು ಪ್ರತಿನಿಧಿಸುತ್ತದೆ; ಪ್ರತೀ ಮಗುವೂ ಅಷ್ಟೇ ಅಮೂಲ್ಯವಾಗಿದೆ.
ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಆರಂಭಿಕ ಹಂತದಲ್ಲೇ ರೋಗನಿರ್ಣಯ, ಸೂಕ್ತ ಚಿಕಿತ್ಸೆ ಮತ್ತು ಸಮಗ್ರ ಆರೈಕೆಯೊಂದಿಗೆ ಅನೇಕ ಮಕ್ಕಳ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ವಾಸಿ ಮಾಡಬಹುದು. ಈ ಸೆಪ್ಟಂಬರ್ ತಿಂಗಳ ಸಂದೇಶ ಸರಳವಾಗಿದೆ: ಮುನ್ನೆಚ್ಚರಿಕೆಯ ಲಕ್ಷಣಗಳನ್ನು ಗುರುತಿಸಿ, ತತ್‌ಕ್ಷಣವೇ ವೈದ್ಯಕೀಯ ಸಲಹೆ ಪಡೆಯಿರಿ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಿ.
ಭಾರತದಲ್ಲಿ ಬಾಲ್ಯದ ಕ್ಯಾನ್ಸರ್ ಸ್ಥಿತಿಗತಿ
ಒಟ್ಟು ಕ್ಯಾನ್ಸರ್ ಪ್ರಕರಣಗಳಿಗೆ ಹೋಲಿಸಿದರೆ ಮಕ್ಕಳಲ್ಲಿ ಕ್ಯಾನ್ಸರ್ ಪ್ರಮಾಣ ಕಡಿಮೆಯಿದ್ದರೂ, ಭಾರತದಲ್ಲಿ ಮಕ್ಕಳ ಜನಸಂಖ್ಯೆ ಹೆಚ್ಚಿರುವುದರಿಂದ ಇದರ ಒಟ್ಟಾರೆ ಪ್ರಮಾಣ ದೊಡ್ಡದಾಗಿದೆ.
ಭಾರತದ ರಾಷ್ಟ್ರೀಯ ಅಂದಾಜು ಅಧ್ಯಯನದ ಪ್ರಕಾರ, ದೇಶದಲ್ಲಿ ಪ್ರತಿವರ್ಷ 0ಯಿಂದ 14 ವರ್ಷದೊಳಗಿನ ಸುಮಾರು 52,000 ಮಕ್ಕಳು ಮತ್ತು 0ಯಿಂದ 19 ವರ್ಷದೊಳಗಿನ ಸುಮಾರು 78,000 ಮಕ್ಕಳು ಹಾಗೂ ಹದಿಹರೆಯದವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಇಡೀ ದೇಶವನ್ನು ಒಳಗೊಂಡ ಮಕ್ಕಳ ಕ್ಯಾನ್ಸರ್ ನೋಂದಣಿ ವ್ಯವಸ್ಥೆ ಇನ್ನೂ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ, ಇವು ಅಂದಾಜು ಅಂಕಿ-ಅಂಶಗಳಾಗಿವೆ.
ಮಕ್ಕಳ ಕ್ಯಾನ್ಸರ್ ಮತ್ತು ಹಿರಿಯರ ಕ್ಯಾನ್ಸರ್ ನಡುವಿನ ವ್ಯತ್ಯಾಸವೇನು?
ಮಕ್ಕಳಲ್ಲಿ ಬರುವ ಕ್ಯಾನ್ಸರ್ ಹಿರಿಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ.
ಹಿರಿಯರಲ್ಲಿ ಬರುವ ಕ್ಯಾನ್ಸರ್‌ಗೆ ತಂಬಾಕು, ಮದ್ಯಪಾನ, ಜೀವನಶೈಲಿ ಅಥವಾ ದೀರ್ಘಕಾಲದ ಪರಿಸರ ಮಾಲಿನ್ಯದಂತಹ ಅಂಶಗಳು ಕಾರಣವಾಗಿರಬಹುದು. ಆದರೆ ಮಕ್ಕಳ ಕ್ಯಾನ್ಸರ್ ಸಾಮಾನ್ಯವಾಗಿ ಜೀವಕೋಶಗಳು ಬೆಳೆಯುವ ಮತ್ತು ವೃದ್ಧಿಯಾಗುವ ಹಂತದಲ್ಲಿ ಆಗುವ ಅಸಹಜ ಬದಲಾವಣೆಗಳಿಂದ ಉಂಟಾಗುತ್ತದೆ.
ಹೆಚ್ಚಿನ ಪ್ರಕರಣಗಳಲ್ಲಿ, ಮಕ್ಕಳ ಕ್ಯಾನ್ಸರ್‌ಗೆ ಪೋಷಕರು ಮಾಡಿದ ಅಥವಾ ಮಾಡದಿರುವ ಯಾವುದೇ ಕೆಲಸಗಳು ಕಾರಣವಲ್ಲ. ಮಗುವಿಗೆ ಕ್ಯಾನ್ಸರ್ ಇದೆ ಎಂದು ತಿಳಿದಾಗ ಪೋಷಕರು ಅಪರಾಧಪ್ರಜ್ಞೆಗೆ ಒಳಗಾಗುವುದುಂಟು, ಆದರೆ ಮಕ್ಕಳ ಕ್ಯಾನ್ಸರ್‌ಗೆ ಯಾರೂ ಹೊಣೆಯಲ್ಲ.
ಇನ್ನೊಂದು ಮುಖ್ಯ ವ್ಯತ್ಯಾಸವೆಂದರೆ, ಮಕ್ಕಳಲ್ಲಿನ ಹೆಚ್ಚಿನ ಕ್ಯಾನ್ಸರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಹಾಗೂ ಅವರು ಚಿಕಿತ್ಸೆಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಾರೆ. ಚಿಕಿತ್ಸೆ ಪೂರ್ಣಗೊಳಿಸಿದ ಮಕ್ಕಳು ಮುಂದೆ ಆರೋಗ್ಯಕರ ಮತ್ತು ಸಾರ್ಥಕ ಜೀವನ ನಡೆಸಬಹುದು. ಆದ್ದರಿಂದ, ಇಲ್ಲಿನ ಗುರಿ ಕೇವಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಹೆಚ್ಚಿನ ಮಕ್ಕಳನ್ನು ಗುಣಪಡಿಸಿ ಅವರು ಚಿಕಿತ್ಸೆಯ ಅನಂತರ ಉತ್ತಮ ಜೀವನ ನಡೆಸುವಂತೆ ಮಾಡುವುದಾಗಿದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ವಿಧಗಳು
ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದವು:
ಲ್ಯುಕೇಮಿಯಾ ಮತ್ತು ಲಿಂಫೋಮಾ: ರಕ್ತ ಉತ್ಪತ್ತಿ ಮಾಡುವ ಅಂಗಾಂಶಗಳು, ಮೂಳೆ ಮಜ್ಜೆ ಮತ್ತು ದುಗ್ಧ ರಸ ನಾಳಗಳ (Lymphatics) ಕ್ಯಾನ್ಸರ್. ಇದರಲ್ಲಿ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ALL) ಅತ್ಯಂತ ಸಾಮಾನ್ಯವಾಗಿ ಕಂಡುಬರುವ ವಿಧ.
ಮೆದುಳು ಮತ್ತು ನರಮಂಡಲದ ಗಡ್ಡೆಗಳು (Brain and CNS Tumours)
ನ್ಯೂರೋಬ್ಲಾಸ್ಟೋಮಾ (Neuroblastoma)
ವಿಲ್ಮ್ಸ್ ಗಡ್ಡೆ (Wilms Tumour) ಮತ್ತು ಇತರ ಮೂತ್ರಪಿಂಡದ ಗಡ್ಡೆಗಳು
ರೆಟಿನೋಬ್ಲಾಸ್ಟೋಮಾ (Retinoblastoma): ಕಣ್ಣಿನ ಕ್ಯಾನ್ಸರ್
ಆಸ್ಟಿಯೋಸಾರ್ಕೋಮಾ ಮತ್ತು ಈವಿಂಗ್ ಸಾರ್ಕೋಮಾದಂತಹ ಮೂಳೆ ಗಡ್ಡೆಗಳು (Bone Tumours)
ಮೃದು ಅಂಗಾಂಶಗಳ ಸಾರ್ಕೋಮಾ (Soft-tissue Sarcomas)
ಜರ್ಮ್-ಸೆಲ್ ಮತ್ತು ಇತರ ಗಡ್ಡೆಗಳು (Germ-cell Tumours)
ಪ್ರತಿಯೊಂದು ವಿಧದ ಕ್ಯಾನ್ಸರ್ ಭಿನ್ನವಾಗಿರುತ್ತದೆ. ಮಗುವಿನ ರೋಗನಿರ್ಣಯ, ವಯಸ್ಸು, ರೋಗದ ಹಂತ ಮತ್ತು ಜೈವಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಯೋಜಿಸಲಾಗುತ್ತದೆ.
ಪೋಷಕರು ತಿಳಿದಿರಲೇಬೇಕಾದ ಮುನ್ನೆಚ್ಚರಿಕೆ ಲಕ್ಷಣಗಳು
ಬಾಲ್ಯದ ಕ್ಯಾನ್ಸರ್ ಜಾಗೃತಿ ತಿಂಗಳ ಪ್ರಮುಖ ಸಂದೇಶವೆಂದರೆ ಆರಂಭಿಕ ಹಂತದಲ್ಲೇ ರೋಗಲಕ್ಷಣಗಳನ್ನು ಗುರುತಿಸುವುದು.
ಮಕ್ಕಳ ಕ್ಯಾನ್ಸರ್‌ನ ಅನೇಕ ಲಕ್ಷಣಗಳು ಸಾಮಾನ್ಯ ಬಾಲ್ಯದ ಕಾಯಿಲೆಗಳಂತೆಯೇ ಇರುತ್ತವೆ. ಈ ಲಕ್ಷಣಗಳಿರುವ ಹೆಚ್ಚಿನ ಮಕ್ಕಳಿಗೆ ಕ್ಯಾನ್ಸರ್ ಇರುವುದಿಲ್ಲ. ಆದರೆ, ಲಕ್ಷಣಗಳು ನಿರಂತರವಾಗಿದ್ದರೆ, ವಿವರಣೆಗೆ ಸಿಗದಿದ್ದರೆ ಅಥವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ವೈದ್ಯರಿಂದ ತಪಾಸಣೆಗೊಳಪಡಿಸುವುದು ಅಗತ್ಯ.
ಮಕ್ಕಳ ಕ್ಯಾನ್ಸರ್ ಚಿಕಿತ್ಸೆ
ಚಿಕಿತ್ಸೆಯು ಕ್ಯಾನ್ಸರ್ ವಿಧ, ಹಂತ ಮತ್ತು ತೀವ್ರತೆಯನ್ನು ಆಧರಿಸಿದೆ. ಇದು ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಇಮ್ಯುನೊಥೆರಪಿ/ಟಾರ್ಗೆಟೆಡ್ ಥೆರಪಿ ಮತ್ತು ಮೂಳೆ ಮಜ್ಜೆ ಕಸಿಯ ಸಂಯೋಜನೆಯನ್ನು ಒಳಗೊಂಡಿರಬಹುದು. ಚಿಕಿತ್ಸೆಯನ್ನು ಮಗುವಿನ ಸ್ಥಿತಿಗೆ ತಕ್ಕಂತೆ ಪ್ರತ್ಯೇಕವಾಗಿ ಮಕ್ಕಳ ಕ್ಯಾನ್ಸರ್ ತಜ್ಞರ ತಂಡವು ಯೋಜಿಸುತ್ತದೆ.
ಚಿಕಿತ್ಸೆಯ ಆಚೆಗಿನ ಆರೈಕೆ
ಮಕ್ಕಳ ಕ್ಯಾನ್ಸರ್ ಆರೈಕೆಯ ಸಾಫಲ್ಯ ಕೇವಲ ಕೀಮೋಥೆರಪಿ ಅಥವಾ ಶಸ್ತ್ರಚಿಕಿತ್ಸೆಗೆ ಸೀಮಿತವಾಗಿಲ್ಲ. ಚಿಕಿತ್ಸೆಯ ಸಮಯದಲ್ಲಿ ಮಕ್ಕಳು ರಕ್ತಹೀನತೆ, ಸೋಂಕುಗಳು, ರಕ್ತದ ಕಣಗಳ ಕೊರತೆ, ಪೌಷ್ಟಿಕಾಂಶದ ಸಮಸ್ಯೆಗಳು, ವಾಕರಿಕೆ, ನೋವು ಮತ್ತು ಮಾನಸಿಕ ಒತ್ತಡವನ್ನು ಅನುಭವಿಸಬಹುದು.
ಆದ್ದರಿಂದ, ಬೆಂಬಲಿತ ಆರೈಕೆ ಮಕ್ಕಳ ಆಂಕಾಲಜಿಯ ಅತ್ಯಗತ್ಯ ಭಾಗವಾಗಿದೆ. ಇದು ಸೋಂಕಿನ ನಿರ್ವಹಣೆ, ರಕ್ತ ಮತ್ತು ಪ್ಲೇಟ್‌ಲೆಟ್ ಬೆಂಬಲ, ಪೌಷ್ಟಿಕಾಂಶ, ನೋವು ನಿಯಂತ್ರಣ, ಮಾನಸಿಕ ಬೆಂಬಲ, ಪುನರ್ವಸತಿ, ಶಿಕ್ಷಣ ಮತ್ತು ಕುಟುಂಬದ ಕೌನ್ಸಿಲಿಂಗ್ ಅನ್ನು ಒಳಗೊಂಡಿದೆ. ಕ್ಯಾನ್ಸರ್ ಅನ್ನು ಗುಣಪಡಿಸುವುದು ಮಾತ್ರವಲ್ಲದೆ, ಮಗು ಮತ್ತೆ ಶಾಲೆ, ಕುಟುಂಬ ಜೀವನ ಮತ್ತು ಆರೋಗ್ಯಕರ ಬಾಲ್ಯಕ್ಕೆ ಮರಳುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಜಾಗೃತಿ ಬದಲಾವಣೆ ತರಬಲ್ಲದು
ಭಾರತವು ಮಕ್ಕಳ ಕ್ಯಾನ್ಸರ್ ಆರೈಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಆದರೆ ತಡವಾದ ರೋಗನಿರ್ಣಯ, ಜಾಗೃತಿಯ ಕೊರತೆ, ಚಿಕಿತ್ಸೆಯ ಲಭ್ಯತೆ ಮತ್ತು ಆರ್ಥಿಕ ತೊಂದರೆಗಳು ಇನ್ನೂ ಅನೇಕ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿವೆ.
ಹಾಗಾಗಿ ನಿರಂತರ ಲಕ್ಷಣಗಳತ್ತ ಗಮನ ನೀಡುವ, ಅಸಾಮಾನ್ಯ ಲಕ್ಷಣಗಳ ತಪಾಸಣೆಯ ಅಗತ್ಯವಿದೆ. ಶಂಕಿತ ಮಗುವನ್ನು ತತ್‌ಕ್ಷಣವೇ ಸೂಕ್ತ ವೈದ್ಯರ ಬಳಿಗೆ ಕಳುಹಿಸುವುದು ಅಗತ್ಯ.
ಕ್ಯಾನ್ಸರ್ ಶಂಕಿತ ಮಗುವಿಗೆ ತತ್‌ಕ್ಷಣವೇ ಸೂಕ್ತ ವೈದ್ಯರ ಬಳಿಗೆ ಕಳುಹಿಸುವಿಕೆ ಮತ್ತು ಸರಿಯಾದ ಚಿಕಿತ್ಸೆಯ ಅಗತ್ಯವಿದೆ.
ಈ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸದಲ್ಲಿ, ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಂದು ಮಗುವಿನೊಂದಿಗೆ, ಅವರ ಜತೆಗಿರುವ ಕುಟುಂಬದೊಂದಿಗೆ ಮತ್ತು ಕ್ಯಾನ್ಸರ್ ಗೆದ್ದು ಬಂದ ಪ್ರತಿಯೊಬ್ಬ ವಿಜೇತರೊಂದಿಗೆ ನಾವು ಜತೆಯಾಗಿ ನಿಲ್ಲೋಣ.
ನಾವು ಸಾಧಿಸಿದ ಪ್ರಗತಿಯನ್ನು ಶ್ಲಾ ಸೋಣ ಮತ್ತು ಪ್ರತಿಯೊಂದು ಮಗುವಿಗೆ ಉತ್ತಮ ಫಲಿತಾಂಶ ಸಿಗುವಂತೆ ಶ್ರಮಿಸೋಣ.
ಆರಂಭದಲ್ಲೇ ಗುರುತಿಸಿ. ಬೇಗನೆ ತಜ್ಞರಿಗೆ ತೋರಿಸಿ. ಸರಿಯಾದ ಚಿಕಿತ್ಸೆ ನೀಡಿ. ಹೆಚ್ಚಿನ ಜೀವಗಳನ್ನು ಉಳಿಸಿ.
ಏಕೆಂದರೆ ಪ್ರತಿಯೊಂದು ಮಗುವಿಗೂ ಕ್ಯಾನ್ಸರ್‌ನಿಂದ ಆಚೆಗೆ ಬೆಳೆಯುವ, ಕಲಿಯುವ, ಆಟವಾಡುವ, ಕನಸು ಕಾಣುವ ಮತ್ತು ಆರೋಗ್ಯಕರ ಜೀವನ ನಡೆಸುವ ಹಕ್ಕಿದೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮಕ್ಕಳ ಆಂಕಾಲಜಿ ಮತ್ತು ಹೆಮಟಾಲಜಿ, ಸರ್ಜಿಕಲ್ ಮತ್ತು ರೇಡಿಯೇಶನ್ ಆಂಕಾಲಜಿ ತಂಡಗಳು, ರೋಗಶಾಸ್ತ್ರ, ರೇಡಿಯಾಲಜಿ, ಶೂಶ್ರೂಷೆ ಮತ್ತು ನೆರವು ಸೇವೆಗಳನ್ನು ಒಳಗೊಂಡ ಬಹುವಿಭಾಗೀಯ ಆರೈಕೆಯನ್ನು ನೀಡಲಾಗುತ್ತದೆ. ಲಭ್ಯವಿರುವ ಚಿಕಿತ್ಸೆಗಳಲ್ಲಿ ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಇಮ್ಯುನೊಥೆರಪಿ/ಟಾರ್ಗೆಟೆಡ್ ಥೆರಪಿ ಮತ್ತು ಮೂಳೆ ಮಜ್ಜೆ ಕಸಿ ಸೇರಿವೆ.
ಪೋಷಕರು ಗಮನಿಸಬೇಕಾದ ಲಕ್ಷಣಗಳು
ನಿರಂತರವಾದ ಅಥವಾ ಕಾರಣವಿಲ್ಲದೆ ಬರುವ ಜ್ವರ
ರಕ್ತಹೀನತೆ, ಆಯಾಸ ಅಥವಾ ನಿಶ್ಶಕ್ತಿ
ಸುಲಭವಾಗಿ ಗಾಯಗಳಾಗುವುದು (Bruising), ರಕ್ತಸ್ರಾವ ಅಥವಾ ಚರ್ಮದ ಮೇಲೆ ಸಣ್ಣ ಕೆಂಪು ಚುಕ್ಕೆಗಳು
ಪದೇ ಪದೆ ಅಥವಾ ಅಸಾಮಾನ್ಯವಾಗಿ ಬರುವ ಸೋಂಕುಗಳು
ನಿರಂತರ ಮೂಳೆ ಅಥವಾ ಕೀಲು ನೋವು ಅಥವಾ ಕಾರಣವಿಲ್ಲದೆ ಕುಂಟುವುದು
ಕಾರಣವಿಲ್ಲದೆ ತೂಕ ಇಳಿಕೆ ಅಥವಾ ಹಸಿವಾಗದಿರುವುದು
ನಿರಂತರ ತಲೆನೋವು, ವಿಶೇಷವಾಗಿ ಬೆಳಗ್ಗೆ ಎದ್ದ ಕೂಡಲೇ ವಾಂತಿಯಾಗುವುದು
ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಬಾವು ಕಂಡುಬರುವುದು
ಹೊಟ್ಟೆ ನಿರಂತರವಾಗಿ ದಪ್ಪಗಾಗುವುದು ಅಥವಾ ಗಂಟಿನಂತಾಗುವುದು
ದೃಷ್ಟಿ, ನಡಿಗೆ, ಸಮತೋಲನ ಅಥವಾ ನಡವಳಿಕೆಯಲ್ಲಿ ಬದಲಾವಣೆಗಳು
ಕಣ್ಣಿನಲ್ಲಿ (ವಿಶೇಷವಾಗಿ ಛಾಯಾಚಿತ್ರಗಳಲ್ಲಿ) ಬಿಳಿ ರೇಖೆ ಅಥವಾ ಪ್ರತಿಫಲನ ಕಾಣಿಸುವುದು
"ಈ ಲಕ್ಷಣಗಳ ಪೈಕಿ ಒಂದು ಇದ್ದ ಕೂಡಲೇ ಮಗುವಿಗೆ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಆದರೆ, ಯಾವುದಾದರೂ ಲಕ್ಷಣ ಅಸಾಮಾನ್ಯವಾಗಿ, ನಿರಂತರವಾಗಿ ಮತ್ತು ಕಾರಣವಿಲ್ಲದೆ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಒಳಿತು.''
ತಪ್ಪು ಕಲ್ಪನೆಗಳು ಮತ್ತು ಸತ್ಯ ಸಂಗತಿಗಳು
ತಪ್ಪು ಕಲ್ಪನೆ: ಮಕ್ಕಳ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ.
ಸತ್ಯ: ಮಕ್ಕಳಲ್ಲಿ ಕಂಡುಬರುವ ಹೆಚ್ಚಿನ ಕ್ಯಾನ್ಸರ್‌ಗಳನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಸಂಪೂರ್ಣವಾಗಿ ವಾಸಿಮಾಡಬಹುದು. ರೋಗನಿರ್ಣಯ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಸುಧಾರಣೆಗಳು ಫಲಿತಾಂಶವನ್ನು ಹೆಚ್ಚಿಸಿವೆ.
ತಪ್ಪು ಕಲ್ಪನೆ: ಪೋಷಕರ ತಪ್ಪಿನಿಂದಲೇ ಮಗುವಿಗೆ ಕ್ಯಾನ್ಸರ್ ಬಂದಿದೆ.
ಸತ್ಯ: ಪೋಷಕರು ಮಾಡಿದ ಅಥವಾ ಮಾಡದಿರುವ ಯಾವುದೇ ಕೆಲಸದಿಂದ ಮಕ್ಕಳ ಕ್ಯಾನ್ಸರ್ ಬರುವುದಿಲ್ಲ. ಪೋಷಕರು ತಮ್ಮನ್ನು ತಾವು ದೂಷಿಸಿಕೊಳ್ಳಬಾರದು.
ತಪ್ಪು ಕಲ್ಪನೆ: ಮಕ್ಕಳ ಕ್ಯಾನ್ಸರ್ ಸಾಂಕ್ರಾಮಿಕ.
ಸತ್ಯ: ಮಕ್ಕಳ ಕ್ಯಾನ್ಸರ್ ಸಾಂಕ್ರಾಮಿಕವಲ್ಲ. ಸ್ಪರ್ಶಿಸುವುದರಿಂದ, ಆಹಾರ ಹಂಚಿಕೊಳ್ಳುವುದರಿಂದ, ಜತೆಯಲ್ಲಿ ಆಟವಾಡುವುದರಿಂದ ಅಥವಾ ಒಟ್ಟಿಗಿರುವುದರಿಂದ ಒಬ್ಬ ಮಗುವಿನಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
ತಪ್ಪು ಕಲ್ಪನೆ: ಗಡ್ಡೆ ಎಂದರೆ ಸದಾ ಕ್ಯಾನ್ಸರ್ ಎಂದೇ ಅರ್ಥ.
ಸತ್ಯ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ಗಡ್ಡೆಗಳು ಕ್ಯಾನ್ಸರ್ ಅಲ್ಲ. ಆದರೆ, ನಿರಂತರವಾಗಿ ಬೆಳೆಯುತ್ತಿರುವ ಅಥವಾ ಕಾರಣವಿಲ್ಲದ ಗಡ್ಡೆಯನ್ನು ವೈದ್ಯರಿಂದ ತಪಾಸಣೆ ಮಾಡಿಸಬೇಕು.
ತಪ್ಪು ಕಲ್ಪನೆ: ಕ್ಯಾನ್ಸರ್ ಇರುವ ಮಗು ಶಾಲೆಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಸತ್ಯ: ವೈದ್ಯಕೀಯವಾಗಿ ಸೂಕ್ತವಾಗಿದ್ದರೆ, ಅಗತ್ಯ ಮುನ್ನೆಚ್ಚರಿಕೆ ಮತ್ತು ಮಾರ್ಪಾಡುಗಳೊಂದಿಗೆ ಮಕ್ಕಳು ಚಿಕಿತ್ಸೆಯ ಸಮಯದಲ್ಲಿಯೂ ಶಿಕ್ಷಣವನ್ನು ಮುಂದುವರಿಸಬಹುದು ಮತ್ತು ಸ್ನೇಹಿತರೊಡನೆ ಬೆರೆಯಬಹುದು.
ತಪ್ಪು ಕಲ್ಪನೆ: ಕೀಮೋಥೆರಪಿ ಒಂದೇ ಕ್ಯಾನ್ಸರ್‌ಗೆ ಇರುವ ಚಿಕಿತ್ಸೆ.
ಸತ್ಯ: ಕ್ಯಾನ್ಸರ್ ಪ್ರಕಾರವನ್ನು ಆಧರಿಸಿ ಚಿಕಿತ್ಸೆ ನಿರ್ಧಾರವಾಗುತ್ತದೆ. ಇದರಲ್ಲಿ ಕೀಮೋಥೆರಪಿ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಇಮ್ಯುನೊಥೆರಪಿ, ಟಾರ್ಗೆಟೆಡ್ ಥೆರಪಿ ಮತ್ತು ಮೂಳೆ ಮಜ್ಜೆ ಕಸಿ ಒಳಗೊಂಡಿರಬಹುದು.
ತಪ್ಪು ಕಲ್ಪನೆ: ಕ್ಯಾನ್ಸರ್ ಇರುವ ಮಗುವಿಗೆ ಸಾಮಾನ್ಯ ಬಾಲ್ಯ ಇರಲು ಸಾಧ್ಯವಿಲ್ಲ.
ಸತ್ಯ: ಚಿಕಿತ್ಸೆಯು ಕಷ್ಟಕರವಾಗಿದ್ದರೂ, ಮಕ್ಕಳು ಕಲಿಯಲು, ಆಟವಾಡಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆರೆಯಲು ಸಾಧ್ಯವಿದೆ. ಶಿಕ್ಷಣ, ಮಾನಸಿಕ ಒಳಿತನ್ನು ಕಾಯ್ದುಕೊಳ್ಳುವುದು ಚಿಕಿತ್ಸೆಯ ಪ್ರಮುಖ ಭಾಗವಾಗಿದೆ.
ತಪ್ಪು ಕಲ್ಪನೆ: ಚಿಕಿತ್ಸೆ ಪೂರ್ಣಗೊಂಡ ಅನಂತರ ಯಾವುದೇ ಫಾಲೋ-ಅಪ್ (ನಿಯಮಿತ ತಪಾಸಣೆ) ಅಗತ್ಯವಿಲ್ಲ.
ಸತ್ಯ: ಚಿಕಿತ್ಸೆಯ ಅನಂತರ ಮಗುವಿನ ಬೆಳವಣಿಗೆ, ಶಿಕ್ಷಣ, ಅಂಗಾಂಗಗಳ ಆರೋಗ್ಯ ಮತ್ತು ದೀರ್ಘಕಾಲದ ಒಳಿತನ್ನು ಮೇಲ್ವಿಚಾರಣೆ ಮಾಡಲು ನಿಯಮಿತ ತಪಾಸಣೆ ಅತ್ಯಗತ್ಯ.
-ಡಾ| ಸ್ವಾತಿ ಪಿ.ಎಂ.
ಅಸೋಸಿಯೇಟ್ ಪ್ರೊಫೆಸರ್
ಪೀಡಿಯಾಟ್ರಿಕ್ ಆಂಕಾಲಜಿ ವಿಭಾಗ
-ಡಾ| ವಾಸುದೇವ ಭಟ್ ಕೆ.
ಪ್ರೊಫೆಸರ್ ಮತ್ತು ಮುಖ್ಯಸ್ಥರು, ಪೀಡಿಯಾಟ್ರಿಕ್ ಆಂಕಾಲಜಿ ವಿಭಾಗ
ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ,
ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್ ಆಂಕಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು)

