ಢಾಕಾ: ಇಂಧನ ಕೊರತೆ ಎದುರಿಸುತ್ತಿರುವ ಬಾಂಗ್ಲಾದೇಶವನ್ನು ಈಗ ವಿದ್ಯುತ್ ಕೊರತೆ ಕಾಡುತ್ತಿದ್ದು, ಬಹುತೇಕ ಗ್ರಾಮಗಳು ದಿನಕ್ಕೆ 10 ಗಂಟೆಗಳನ್ನು ವಿದ್ಯುತ್ ಇಲ್ಲದೇ ಕಳೆಯುತ್ತಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಪವರ್ ಸ್ಟೇಷನ್‌ಗಳ ಮೇಲೆ ದಾಳಿಗಳು ನಡೆದಿವೆ.
ಇದನ್ನು ಸರಿದೂಗಿಸಲು ಹೆಚ್ಚುವರಿ ಡೀಸೆಲ್ ಪೂರೈಕೆ ಮಾಡುವಂತೆ ಭಾರತಕ್ಕೆ ಬಾಂಗ್ಲಾದೇಶ ಮನವಿ ಮಾಡಿದೆ.
ತೀವ್ರ ಸೆಖೆಯಿಂದಾಗಿ ಬಾಂಗ್ಲಾದಲ್ಲಿ ಪ್ರತಿನಿತ್ಯದ ವಿದ್ಯುತ್ ಬೇಡಿಕೆ 18000 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಆದರೆ ಇಂಧನ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ದಿನಕ್ಕೆ 13000 ಮೆಗಾವ್ಯಾಟ್ ವಿದ್ಯುತ್ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 10 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುತ್ತಿದೆ. ಎಲ್‌ಎನ್‌ಜಿ ಬಳಸಿ ಬಾಂಗ್ಲಾದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಎಲ್‌ಎನ್‌ಜಿ ಪೂರೈಕೆ ವ್ಯತ್ಯಯಗೊಂಡಿದೆ. ಈಗಾಗಲೇ ನೌಕೆಗಳು ಎಲ್‌ಎನ್‌ಜಿ ಹೊತ್ತು ಬಾಂಗ್ಲಾದತ್ತ ಸಾಗಿದ್ದರೂ ಪ್ರಕ್ಷುಬ್ಧ ಸಮುದ್ರದ ಕಾರಣದಿಂದ ಅವುಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ.
ವಿದ್ಯುತ್ ಕೊರತೆಯನ್ನು ನೀಗಿಸಲು ರಾತ್ರಿ 8 ಗಂಟೆಗೆ ಎಲ್ಲ ಶಾಪಿಂಗ್ ಮಾಲ್, ಅಂಗಡಿಗಳು, ಮಾರುಕಟ್ಟೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಲೋಡ್ ಶೆಡ್ಡಿಂಗ್‌ನಿಂದ ಬೇಸತ್ತು ಪವರ್ ಸ್ಟೇಷನ್‌ಗಳ ಮೇಲೆ ಹಳ್ಳಿಗರು ದಾಳಿ ಆರಂಭಿಸಿದ್ದಾರೆ.

