ಬಾಯಿಯ ದುರ್ವಾಸನೆ (Halitosis) ಅನೇಕರು ಎದುರಿಸುವ ಸಾಮಾನ್ಯ ಸಮಸ್ಯೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಬಾಯಿಯ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತದೆ. ಆದರೆ ಕೆಲವೊಮ್ಮೆ ದೇಹದ ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯೂ ಆಗಿರಬಹುದು. ಆದ್ದರಿಂದ ನಿರಂತರವಾಗಿ ದುರ್ವಾಸನೆ ಇದ್ದರೆ ಅದನ್ನು ನಿರ್ಲಕ್ಷಿಸಬಾರದು.
ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣಗಳು
*ಹಲ್ಲು ಮತ್ತು ನಾಲಿಗೆ ಸ್ವಚ್ಛವಾಗಿರದಿರುವುದು: ಆಹಾರದ ಕಣಗಳು ಮತ್ತು ಬ್ಯಾಕ್ಟೀರಿಯಾಗಳು ಸೇರಿ ದುರ್ವಾಸನೆ ಉಂಟುಮಾಡುತ್ತವೆ.
*ಬಾಯಿ ಒಣಗುವುದು: ಕಡಿಮೆ ನೀರು ಕುಡಿಯುವುದು ಅಥವಾ ಲಾಲಾರಸದ ಪ್ರಮಾಣ ಕಡಿಮೆಯಾದರೆ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ.
*ಒಸಡುಗಳ ಕಾಯಿಲೆ: ಒಸಡುಗಳಲ್ಲಿ ಸೋಂಕು ಅಥವಾ ಉರಿಯೂತ ಇದ್ದರೆ ದುರ್ವಾಸನೆ ಕಾಣಿಸಬಹುದು.
*ಧೂಮಪಾನ ಮತ್ತು ತಂಬಾಕು: ಇವು ಬಾಯಿಯ ದುರ್ವಾಸನೆಯನ್ನು ಹೆಚ್ಚಿಸುವುದಲ್ಲದೆ ಬಾಯಿಯ ಆರೋಗ್ಯವನ್ನೂ ಹಾಳುಮಾಡುತ್ತವೆ.
ಇದು ಯಾವ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು?
1. ಒಸಡುಗಳ ಸೋಂಕು ಅಥವಾ ಹಲ್ಲಿನ ಹುಳು.
2. ಸೈನಸ್ ಸೋಂಕು ಅಥವಾ ಗಂಟಲಿನ ಸೋಂಕು.
3. ಮಧುಮೇಹದಲ್ಲಿ ಕೆಲವು ಸಂದರ್ಭಗಳಲ್ಲಿ ಹಣ್ಣಿನಂತಹ ವಿಚಿತ್ರ ವಾಸನೆ.
4. ಅಪರೂಪವಾಗಿ ಜೀರ್ಣಾಂಗ, ಯಕೃತ್ತು ಅಥವಾ ಮೂತ್ರಪಿಂಡದ ಕೆಲವು ಸಮಸ್ಯೆಗಳಲ್ಲಿಯೂ ನಿರಂತರ ದುರ್ವಾಸನೆ ಕಾಣಿಸಬಹುದು.
ಏನು ಮಾಡಬೇಕು?
*ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ, ನಾಲಿಗೆಯನ್ನೂ ಸ್ವಚ್ಛಗೊಳಿಸಿ.
*ಸಾಕಷ್ಟು ನೀರು ಕುಡಿಯಿರಿ.
*ಊಟದ ಅನಂತರ ಬಾಯಿ ಮುಕ್ಕಳಿಸಿ.
*ಆರು ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳಿ.
ಹೀಗಾದರೆ ಹೇಗಿರುತ್ತಿತ್ತು? ನಮ್ಮ ಕಿವಿಗಳು ವಾಲ್ಯೂಮ್ ನಾಬ್‌ಗಳಂತೆ ಕೆಲಸ ಮಾಡಿದರೆ?
ನಮ್ಮ ಕಿವಿಗಳು ರೇಡಿಯೋ ವಾಲ್ಯೂಮ್ ನಾಬ್‌ಗಳಂತೆ ಕೆಲಸ ಮಾಡಿದರೆ, ಗಲಾಟೆ ಕೇಳಿ ಬೇಸರವಾದಾಗ ನಮ್ಮ ಕಿವಿಯನ್ನು ನಾವೇ ತಿರುಗಿಸಿ "ಮ್ಯೂಟ್' ಮಾಡಬಹುದಿತ್ತು! ಪತ್ನಿ ಅಥವಾ ಬಾಸ್ ಬೈಯುವಾಗ, ಅವರ ಎದುರೇ ನಿಧಾನವಾಗಿ ಕಿವಿಯ ವಾಲ್ಯೂಮ್ ಸೊನ್ನೆಗೆ ಇಟ್ಟುಕೊಂಡು ಮುಗುಳ್ನಗಬಹುದಿತ್ತು. ಇನ್ನು ರಹಸ್ಯ ಕೇಳಿಸಿಕೊಳ್ಳಬೇಕಾದರೆ ಕಿವಿಯ ನಾಬ್ ಅನ್ನು ಫುಲ್ ವಾಲ್ಯೂಮ್‌ಗೆ ಇಟ್ಟುಕೊಂಡು ಬೇಹುಗಾರಿಕೆ ಮಾಡಬಹುದಿತ್ತು. ಆದರೆ ಟ್ರಾಫಿಕ್‌ನಲ್ಲಿ ಮರೆತು ಮ್ಯೂಟ್ ಮಾಡಿಕೊಂಡಿದ್ದರೆ ಹಿಂದಿ ನಿಂದ ಬರುವ ವಾಹನಗಳ ಹಾರ್ನ್ ಕೇಳದೆ ಅಪಘಾತವಾಗುತ್ತಿತ್ತು. ಕಿವಿಯ ವಾಲ್ಯೂಮ್ ಜಾಸ್ತಿ ಇಟ್ಟಾಗ ಅಪ್ಪಿತಪ್ಪಿ ಸೊಳ್ಳೆ ಕಿವಿಯ ಬಳಿ ಬಂದರೆ, ಅದು ವಿಮಾನದ ಎಂಜಿನ್ ಸೌಂಡ್‌ನಂತೆ ಕೇಳಿ ಹಾರ್ಟ್ ಅಟ್ಯಾಕ್ ಆಗುತ್ತಿತ್ತೇನೋ!

