ಬಂಟ್ವಾಳ: ಬದುಕಿದ್ದ ವ್ಯಕ್ತಿಯೋರ್ವರನ್ನು 'ಮೃತಪಟ್ಟಿದ್ದಾರೆ' ಎಂಬ ಸುಳ್ಳು ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಪರಿಣಾಮ ಮನೆ ಮಂದಿ ಕಂಗಾಲಾದ ಘಟನೆ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಸಮೀಪ ಸಂಭವಿಸಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 28 ವರ್ಷದ ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಮನೆಮಂದಿ ಯುವಕನನ್ನು ಆಯಂಬುಲೆನ್ಸ್ ಮೂಲಕ ಮನೆಗೆ ಕರೆತಂದರು. ಆದರೆ, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ "ಯುವಕ ಮೃತಪಟ್ಟಿದ್ದಾನೆ' ಎಂಬಂತೆ ಸಂದೇಶಗಳು ಹರಿದಾಡಿದವು.
ಯುವಕನ ಸ್ಥಿತಿ ಗಂಭೀರವಾಗಿದ್ದ ಕಾರಣ ಮನೆಗೆ ಕರೆತಂದಿದ್ದೇವೆ ಎಂದು ಮನೆಮಂದಿ ಸ್ಪಷ್ಟನೆ ನೀಡಬೇಕಾಯಿತು. ಈ ಮಧ್ಯೆ "ಯುವಕ ಮೃತಪಟ್ಟಿದ್ದಾನೆ- ಮತ್ತೆ ಉಸಿರಾಡಿದ್ದಾನೆ' ಎಂಬಿತ್ಯಾದಿ ವಿಷಯಗಳೂ ಹರಿದಾಡಿದವು. ಮನೆಮಂದಿ ಯುವಕನನ್ನು ಮತ್ತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ.

