ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದು, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ ಎಂಬಾತನನ್ನು ಬಂಧಿಸಲಾಗಿದೆ.
ಆತನಿಂದ ಕಳವು ಸ್ವತ್ತಾದ 14 ಲಕ್ಷ ರೂ. ಮೂಲ್ಯದ ಚಿನ್ನಾಭರಣಗಳನ್ನು ಹಾಗೂ 7500 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 6ರಂದು ಹೇರಾಡಿ ಗ್ರಾಮದ ಐಟಿಐ ಕಾಲೇಜಿನ ಬಳಿಯ ಮಂಜುನಾಥ್ ರಾವ್ ಎಂಬವರ ಮನೆಯಲ್ಲಿ ಕಳ್ಳತನಾಗಿತ್ತು. ಮನೆಗೆ ಬೀಗ ಹಾಕಿ ಬಾರಕೂರು ನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮನೆಯ ಎದುರು ಬಾಗಿಲು ಒಡೆದು ಬೆಡ್ ರೂಮ್ ನಲ್ಲಿರುವ ಕಪಾಟಿನ ಬೀಗ ಒಡೆದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.
47 ಗ್ರಾಂನ ಚಿನ್ನದ ಮುತ್ತಿನ ಸರ ಮತ್ತು ಪೆಂಡೆಂಟ್, 32 ಗ್ರಾಂನ ಎರಡು ಚಿನ್ನದ ಬಳೆ, 6 ಗ್ರಾಂನ ಒಂದು ಜತೆ ಚಿನ್ನದ ಬೆಂಡೋಲೆ, 4 ಗ್ರಾಂನ ಚಿನ್ನದ ಉಂಗುರ, 3 ಗ್ರಾಂನ ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ ಮತ್ತು ಕವಳಿಗೆ ಮತ್ತು ರೂ. 49000 ನಗದು ಹಣವನ್ನು ಕಳವು ಮಾಡಲಾಗಿತ್ತು. ಒಟ್ಟು 14,67,000 ರೂ ಮೌಲ್ಯದ ಸೊತ್ತು ಕಳವಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಬೆಳ್ಳಿಯಪ್ಪ, ಪೊಲೀಸ್ ಉಪಾಧೀಕ್ಷರು ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಗೋಪಿಕೃಷ್ಣ, ಸಿ.ಪಿ.ಐ ಬ್ರಹ್ಮಾವರ, ಅಶೋಕ್ ಮಾಳಾಬಗಿ, ಪಿ.ಎಸ್.ಐ (ಕಾ&ಸು) ಬ್ರಹ್ಮಾವರ ಠಾಣೆ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಕಿರಣ್, ಸಿದ್ದಪ್ಪ ಸಕನಳ್ಳಿ, ಸುರೇಶ್ ಬಾಬು, ಎ.ಎಸ್.ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ, ಜಯಶೀಲಾ ಇವರುಗಳ ತಂಡ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

