ಬೆಳ್ಮಣ್: ಆರಂಭದಿಂದಲೇ ದುರ್ಬಲಗೊಂಡ ಮುಂಗಾರಿನಿಂದಾಗಿ ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆಯಾಗಿತ್ತು. ಇದರ ನಡುವೆ, ಜೂ. 22ರಿಂದ ಆರಂಭಗೊಂಡ ಆರ್ದ್ರಾ ಮಳೆ ನಕ್ಷತ್ರದಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆ ಕೃಷಿಕರಿಗೆ ಅರೆಬರೆ ಜೀವ ತುಂಬಿದೆ.
ಆರ್ದ್ರಾ ನಕ್ಷತ್ರ ಜುಲೈ 6ರವರೆಗೆ ಚಾಲ್ತಿಯಲ್ಲಿದ್ದು, ಬಳಿಕ ಪುನರ್ವಸು ನಕ್ಷತ್ರ ಪ್ರವೇಶವಾಗಲಿದೆ.
ಸಾಮಾನ್ಯವಾಗಿ ಮುಂಗಾರು ಆರಂಭದಲ್ಲೇ ಮಳೆ ಸುರಿಯು ವುದರಿಂದ ಸಮಸ್ಯೆ ಆಗುತ್ತಿರಲಿಲ್ಲ. ಹೀಗಾಗಿ ಒಂದಿಷ್ಟು ಮಳೆ ಸುರಿಸುವ ಅಥವಾ ಬಂದರೂ ಬಂದೀತು ಎಂಬ ನಿರೀಕ್ಷೆ ಹುಟ್ಟಿಸುವ ಆರ್ದ್ರಾ ನಕ್ಷತ್ರದ ಮೇಲೆ ಜನರು ಆಸೆ ಇಟ್ಟಿದ್ದರು. ಈ ನಕ್ಷತ್ರದಲ್ಲಿ ಜನರ ನಿರೀಕ್ಷೆಯ ಹಾಗೆ ದೊಡ್ಡ ಮಳೆ ಬಾರದೆ ಇದ್ದರೂ ಕೃಷಿಕರ ಚಟುವಟಿಕೆ ಆರಂಭಕ್ಕೆ ಪೂರಕ ಪರಿಸ್ಥಿತಿ ನಿರ್ಮಿಸಿದೆ. ಆದರೆ, ಮುಂದೆಯೂ ಉತ್ತಮ ಮಳೆ ಬಂದರೆ ಮಾತ್ರ ಬೆಳೆ ಉಳಿದೀತು.
ಬೆಳ್ಮಣ್, ಬೋಳ, ಇನ್ನ, ನಿಟ್ಟೆ, ಪಳ್ಳಿ, ಮುಂಡ್ಕೂರು, ಸಾಣೂರು, ಪೊಸ್ರಾಲು, ಸಚ್ಚೇರಿಪೇಟೆ, ಉಳೆಪಾಡಿ ಭಾಗದಲ್ಲಿ ಇನ್ನೂ ಭತ್ತ ಬೆಳೆಯುವ ಕೃಷಿ ಭೂಮಿಗಳು ಹಲವಿವೆ. ಮಳೆಯ ಕೊರತೆಯಿಂದ ಬಾನಿನತ್ತ ಮುಖ ಮಾಡಿದ್ದ ಅವರು ಆರ್ದ್ರಾ ಮಳೆಯ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಇಷ್ಟು ಹೊತ್ತಿಗೆ ಕೃಷಿ ಕಾಯಕ ಮುಗಿಸಿ ಕೈ ತೊಳೆಯಬೇಕಾಗಿದ್ದ ರೈತರು ಇನ್ನೂ ಬಿತ್ತನೆ, ನಾಟಿಯ ಕೆಲಸದಲ್ಲಿದ್ದಾರೆ.
ಕೃಷಿಯನ್ನೇ ನಂಬಿ ಬದುಕುತ್ತಿರುವ ಕರಾವಳಿ ಭಾಗದ ಜನ ಈ ಬಾರಿಯ ಮಳೆಯ ವಿಳಂಬದಿಂದ ಕಂಗೆಟ್ಟಿದ್ದಾರೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿರುವ ಟ್ರಾಕ್ಟರ್‌ಗಳಿಗೆ ಕೆಲಸವಿಲ್ಲದಂತಾಗಿದೆ ಎಂದು ಮುಂಡ್ಕೂರಿನ ಪ್ರಗತಿಪರ ಕೃಷಿಕ ಚಂದ್ರಶೇಖರ ತಿಳಿಸಿದ್ದಾರೆ.
ನೆರೆ ಸೃಷ್ಟಿಸಿದ್ದ ಆರ್ದ್ರಾ!
ಕಳೆದ ಹಲವು ವರ್ಷಗಳಿಂದ ಆರ್ದ್ರಾ ಮಳೆ ಭಾರೀ ನೆರೆಗೆ ಕಾರಣವಾಗುತ್ತಿತ್ತು. ಆದರೆ, ಈ ಬಾರಿ ಜನರು ಆರ್ದ್ರಾ ಮಳೆಯಾದರೂ ಚೆನ್ನಾಗಿ ಸುರಿಯಲಿ ಎಂದು ಬಯಸಿದ್ದು ವಿಶೇಷವಾಗಿತ್ತು. ಮುಂದಿನ ವಾರ ಪ್ರಾರಂಭವಾಗಲಿರುವ ಜನಪ್ರಿಯ ನಕ್ಷತ್ರ ಪುನರ್ವಸು ಮೇಲೆಯೂ ನಿರೀಕ್ಷೆ ಇದೆ.
ನದಿಗಳೂ ತುಂಬಿ ಹರಿದಿಲ್ಲ
ಈ ಹಿಂದಿನ ವರ್ಷಗಳಲ್ಲಿ ಜೂನ್ ಮಧ್ಯಭಾಗದಲ್ಲೇ ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ಈ ಬಾರಿ ಇನ್ನೂ ಅರ್ಧದಷ್ಟು ನೀರಿಲ್ಲ. ಕಳೆದ ಹಲವು ವರ್ಷಗಳಿಂದ ಜೂನ್ ತಿಂಗಳಲ್ಲಿಯೇ ಮೈದುಂಬಿ ಹರಿಯುತ್ತಿದ್ದ ಸಂಕಲಕರಿಯ ಶಾಂಭವಿ ನದಿ ಈ ವರೆಗೂ ಭರ್ತಿಯಾಗಿಲ್ಲ. ಅಲ್ಲಲ್ಲಿ ಮರಳು ಗುಡ್ಡೆಗಳು ಎದ್ದು ಕಾಣುತ್ತಿವೆ.

